ಪ್ರಮುಖ ಸುದ್ದಿ

ಕೊಡಗಿನ ವಿವಿಧೆಡೆ ‘ಅಖಂಡ ಭಾರತ ಸಂಕಲ್ಪ ಸಪ್ತಾಹ’ : ಆ.8 ರಿಂದ ಆರಂಭ

ರಾಜ್ಯ(ಮಡಿಕೇರಿ) ಆ.7 :- ಅಖಂಡ ಭಾರತ ಪುನರ್ ನಿರ್ಮಾಣದ ಸಂಕಲ್ಪತೊಟ್ಟಿರುವ ಹಿಂದೂ ಜಾಗರಣಾ ವೇದಿಕೆಯು ಆ.8 ರಿಂದ 14ರವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ‘ಅಖಂಡ ಭಾರತ ಸಂಕಲ್ಪ ಸಪ್ತಾಹ’ವನ್ನು ನಡೆಸಲಿದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆ.8 ರಂದು ಕೊಡ್ಲಿಪೇಟೆಯಲ್ಲಿ, 9 ರಂದು ಮಡಿಕೇರಿ, 10 ರಂದು ಮಾದಾಪುರ, 11 ರಂದು ಸಿದ್ದಾಪುರ, 13 ರಂದು ಕಲ್ಲುಗುಂಡಿ ಹಾಗೂ ಆ.14 ರಂದು ಕುಶಾಲನಗರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಸಿದ್ದಾಪುರದಲ್ಲಿ ಮಾತ್ರ ಅಂದು ಪೂವಾಹ್ನ 10.30 ಕ್ಕೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇತರೆಡೆಗಳಲ್ಲಿ ಸಂಜೆ 6 ಗಂಟೆ ಬಳಿಕ ಪಂಜಿನ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಜರುಗಲಿದೆ ಎಂದರು.
ಸಭಾ ಕಾರ್ಯಕ್ರಮಗಳಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೇನಾಧಿಕಾರಿಗಳು ಅಧ್ಯಕ್ಷತೆ ವಹಿಸಲಿದ್ದು, ಹಿಂದೂ ಜಾಗರಣಾ ವೇದಿಕೆಯ ಖ್ಯಾತ ವಾಗ್ಮಿಗಳು ದೇಶಭಕ್ತಿಯ ಉಪನ್ಯಾಸ ನೀಡಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ಪೂರ್ವದ ಇತಿಹಾಸದ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದ ಅವರು, ಭಾರತ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಸಾವಿರಾರು ದೇಶಭಕ್ತರ ಬಲಿದಾನವಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯಾ ನಂತರದಲ್ಲಿ ದೇಶವನ್ನಾಳಿದ ರಾಜಕಾರಣಿಗಳು ಶಾಂತಿ ಮತ್ತು ಅಹಿಂಸೆಯಿಂದ ಮಾತ್ರ ನಾವು ಸ್ವಾತಂತ್ರ್ಯ ಪಡೆದಿರುವುದಾಗಿ ಬಿಂಬಿಸಿದ್ದಾರೆ. ತಮಗಾಗದ ಹಲವಾರು ಬಲಿದಾನಿಗಳ ಹೆಸರುಗಳನ್ನು ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗದಂತೆ ನೋಡಿಕೊಂಡು ಸ್ವಾತಂತ್ರ್ಯ ಹೋರಾಟದ ನೈಜ ಚಿತ್ರಣವನ್ನು ತಿರುಚಿದ್ದಾರೆ ಎಂದು ಅಜಿತ್ ಆರೋಪಿಸಿದರು.
ಅಖಂಡವಾಗಿದ್ದ ಭಾರತವನ್ನು ತುಂಡರಿಸಿ ಪಾಕಿಸ್ತಾನವನ್ನು ಸೃಷ್ಟಿಸಲಾಯಿತು. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನುಭಾವರು ಅಖಂಡ ಭಾರತಕ್ಕಾಗಿ ಹೋರಾಟ ನಡೆಸಿದ್ದರೆ ಹೊರತು ಈಗಿರುವ ತುಂಡು ತುಂಡಾದ ಭಾರತಕ್ಕಾಗಿ ಅಲ್ಲ ಎಂದು ಪ್ರತಿಪಾದಿಸಿದರು.
ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶವನ್ನು ಆಳಲು ಹೊಂಚು ಹಾಕುತ್ತಿದ್ದ ರಾಜಕಾರಣಿಗಳು ಇಡೀ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ದುರುದ್ದೇಶದೊಂದಿಗೆ ಭಾರತವನ್ನು ಮತೀಯ ಆಧಾರದಲ್ಲಿ ತುಂಡರಿಸಿದರು. ಈ ರೀತಿ ಅಖಂಡ ಭಾರತವನ್ನು ತುಂಡರಿಸಿದ ದುಷ್ಟ ರಾಜಕಾರಣಿಗಳ ನೈಜ ಬಣ್ಣವನ್ನು ಭಾರತೀಯರೆಲ್ಲರಿಗು ಮನವರಿಕೆ ಮಾಡುವುದು ತ್ರಿಖಂಡವಾಗಿರುವ ಭಾರತದ ಭಾಗಗಳನ್ನು ಮತ್ತೆ ಒಂದುಗೂಡಿಸಿ ಅಖಂಡ ಭಾರತವನ್ನು ಪುನರ್ ನಿರ್ಮಾಣ ಮಾಡುವುದರೊಂದಿಗೆ ಭಾರತೀಯರ ಹೃದಯದಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚುವುದಕ್ಕಾಗಿ ಹಿಂದೂ ಜಾಗರಣಾ ವೇದಿಕೆ ಪ್ರತಿವರ್ಷ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸುತ್ತಿದೆ ಎಂದು ಅಜಿತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಜಿ.ಅಯ್ಯಣ್ಣ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕೆ.ಎಸ್.ಗಣೇಶ್, ನಗರಾಧ್ಯಕ್ಷ ಸಿ.ಕೆ.ನಂದೀಶ್ ಹಾಗೂ ಜಿಲ್ಲಾ ಸದಸ್ಯ ಶಾಂತೆಯಂಡ ತಿಮ್ಮಯ್ಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: