ಪ್ರಮುಖ ಸುದ್ದಿ

ಅಗಲಿದ ನಾಯಕಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ ಪಡೆದ ಪ್ರಧಾನಿ : ಮೋದಿಯವರ ಕಣ್ಣಲ್ಲಿ ಜಿನುಗಿದ ನೀರು ; ಭಾವುಕರಾದ ಆಡ್ವಾಣಿ

ದೇಶ(ನವದೆಹಲಿ)ಆ.7:-  ಹೃದಯಾಘಾತದಿಂದ ನಿನ್ನೆ ರಾತ್ರಿ ಮೃತಪಟ್ಟ ಮಾಜಿ ಸಚಿವೆ ಸುಷ್ಮಾ ಸ್ವರಾಜ್​ ಅವರ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ  ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಸುಷ್ಮಾ ಸ್ವರಾಜ್  ನಿವಾಸಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ, ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ  ಕ್ಷಣಕಾಲ ಭಾವುಕರಾದರು. ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ ಮೋದಿ ಕಣ್ಣಲ್ಲಿ ನೀರು ಜಿನುಗಿತ್ತು. ನಂತರ ಸುಷ್ಮಾ ಮಗಳಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಮಾತುಗಳನ್ನಾಡಿದರು. ಬಳಿಕ ಅವರ ಪತಿ ಸ್ವರಾಜ್​ ಕೌಶಲ್​ ಬಳಿ ತೆರಳಿ ಸಾಂತ್ವನ ಹೇಳುತ್ತ ಕಣ್ಣೀರಾದರು. ಹಾಗೇ ಪಾರ್ಥಿವ ಶರೀರದ ಎದುರು ಮೌನವಾಗಿ ನಿಂತುಬಿಟ್ಟರು.

ಕಳೆದ ವರ್ಷ ಆಗಸ್ಟ್​ 16ರಂದು ತಮ್ಮ ಗುರು ಅಟಲ್​ ಬಿಹಾರಿ ವಾಜಪೇಯಿ ಅವರನ್ನು ಕಳೆದುಕೊಂಡು ಮೋದಿ ಕಣ್ಣೀರು ಹಾಕಿದ್ದರು. ಈಗ ವಾಜಪೇಯಿ ಅವರ ನಂಬಿಗಸ್ಥ ಶಿಷ್ಯೆಯೆನಿಸಿಕೊಂಡಿದ್ದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಹೆಚ್ಚಲು ಕಾರಣವಾಗಿದ್ದ ಸುಷ್ಮಾ ಸ್ವರಾಜ್​ ಅವರ ದಿಢೀರ್​ ಮರಣ ಬಿಜೆಪಿ ವಲಯವನ್ನು ತೀವ್ರ ದುಃಖಕ್ಕೆ ಈಡುಮಾಡಿದೆ.

ನಿನ್ನೆ ರಾತ್ರಿ ಸುಷ್ಮಾ ಮೃತಪಟ್ಟಿರುವ ಸುದ್ದಿಕೇಳುತ್ತಲೇ ಟ್ವೀಟ್​ ಮಾಡಿದ್ದ ಮೋದಿ, ಅವರ ಅನಾರೋಗ್ಯವನ್ನೂ ಲೆಕ್ಕಿಸದೆ ವಿದೇಶಾಂಗ ವ್ಯವಹಾರ ಖಾತೆಯನ್ನು ನಿಭಾಯಿಸಿದ್ದರು. ಅವರ ಇಡೀ ಜೀವನವನ್ನು ದೇಶದ ಜನರ ಸೇವೆಗೆ ಮೀಸಲಿಟ್ಟಿದ್ದರು. ಕೋಟ್ಯಂತರ ಜನರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು ಎಂದು ಟ್ವೀಟ್​ ಮಾಡಿದ್ದರು. ಹಾಗೇ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಹೇಳಿದ್ದರು.

ದೆಹಲಿಯು ಒಂದೇ ವರ್ಷದಲ್ಲಿ  ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಿದೆ. ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್, ಮದನಲಾಲ್ ಖುರಾನಾ ಅವರನ್ನು ಕಳೆದುಕೊಂಡಿದೆ. ಸುಷ್ಮಾ ಅವರು ಅಕ್ಟೋಬರ್-ಡಿಸೆಂಬರ್ 1998ರಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿದ್ದರು.

ಸುಷ್ಮಾ ಸ್ವರಾಜ್​ ಅಂತಿಮ ದರ್ಶನ ಪಡೆಯಲು ಅನೇಕ ರಾಜಕೀಯ ನಾಯಕರು ನಿವಾಸಕ್ಕೆ ಆಗಮಿಸುತ್ತಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್​, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಹಿರಿಯ ಮುಖಂಡ ಎಲ್​.ಕೆ.ಆಡ್ವಾಣಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್​ ಯಾದವ್​, ಬಹುಜನ ಪಕ್ಷದ ಮುಖ್ಯಸ್ಥೆ ಮಾಯಾವತಿ, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.

ಭಾರತದಲ್ಲಿರುವ ಇಸ್ರೇಲಿ ರಾಯಭಾರಿ ರಾನ್​ ಮಲ್ಕಾ ಕೂಡ ಸುಷ್ಮಾ ಸ್ವರಾಜ್​ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: