ಮೈಸೂರು

ಸಂಶೋಧನೆಗೆ ಪಂಚಭೂತಗಳೇ ಅವಶ್ಯಕ : ಪರೀಕ್ಷಾಂಗ ಕುಲಸಚಿವ ಡಾ. ಮಹದೇವನ್

“ಸಂಶೋಧನೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳು-2” ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ

ಮೈಸೂರು,ಆ.7:-  ಸಂಶೋಧಕರಿಗೆ ಸಮಸ್ಯೆಯ ಆಯ್ಕೆ, ಸಂಬಂಧಿತ  ಸಾಹಿತ್ಯಾವಲೋಕನ, ಸಮಸ್ಯೆಯ ವ್ಯಾಖ್ಯಾನ, ಸಂಶೋಧನೆಯ ವಿನ್ಯಾಸ ತಯಾರಿಕೆ, ದತ್ತಾಂಶ ಸಂಗ್ರಹಣ ಮತ್ತು ವಿಶ್ಲೇಷಣೆ ವಿಧಾನಗಳು ಸಂಶೋಧನೆಗೆ  ಮುಖ್ಯವಾಗಿ ಅವಶ್ಯಕವಾಗಿರುತ್ತದೆ ಹಾಗೂ ಹಳೆಯದರಲ್ಲಿ ಹೊಸ ಹೊಸ ವಿಚಾರಗಳನ್ನು ಅನ್ವೇಷಣೆ ಮಾಡುವುದು, ತಮ್ಮ ಪ್ರಬಂಧದಲ್ಲಿ ಹೊಸತನ್ನು ನೀಡುವುದು ಮುಖ್ಯವಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ  ಕುಲಸಚಿವರಾದ ಡಾ. ಕೆ.ಎಂ. ಮಹದೇವನ್ ತಿಳಿಸಿದರು.

ಅವರಿಂದು “ಸಂಶೋಧನೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳು-2” ಎಂಬ ವಿಷಯದ ಬಗ್ಗೆ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ, ಗ್ರಂಥಾಲಯ ಮತ್ತು ರಿಸರ್ಚ್ ಸೆಲ್ ಮತ್ತು ಐಕ್ಯೂಎಸಿ ವತಿಯಿಂದ ಜಂಟಿಯಾಗಿ ಹಮಿಕೊಳ್ಳಲಾಗಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸೃಷ್ಟಿಯಲ್ಲಿ ನಾವು ಧನಾತ್ಮಕ, ಋಣಾತ್ಮಕದಂತಹ ಕಣ್ಣಿಗೆ ಕಾಣದ ಅಂಶಗಳನ್ನು ಕಾಣುತ್ತೇವೆ. ಇವು ಭೂಮಿಯಲ್ಲಿರುವ ಜೀವಿಗಳಿಗೆ ಬೇಕಾದಂತಹ ಶಕ್ತಿಯನ್ನು ನೀಡುವಲ್ಲಿ ಕಾರ್ಯೋನ್ಮುಖವಾಗಿವೆ. ಇವೇ ಪಂಚಭೂತಗಳಾದ ಗಾಳಿ, ನೀರು, ಬೆಳಕು, ಭೂಮಿ ಮತ್ತು ಆಕಾಶ ಇವುಗಳಲ್ಲಿ ಅಡಗಿರುವ ಅಗಾಧ ಶಕ್ತಿಯೇ ದೇವರು. ಕಣ್ಣಿಗೆ ಕಾಣದ್ದು ಬಹಳಷ್ಟಿದೆ, ಸಣ್ಣ ಸಣ್ಣ ಪರಮಾಣುಕಣಗಳಿಂದ ಮಾನವ ಏನೆಲ್ಲಾ ಸಂಪಾದಿಸಬಲ್ಲ, ಹೊಸ ಅನ್ವೇಷಣೆಗಳ ಕಡೆಗೆ ಮುನ್ನುಗ್ಗುತ್ತಿದ್ದಾನೆ,ಆದರೂ ಮಾನವ ಸೃಷ್ಟಿಯ ಬಗ್ಗೆ ಹೆಚ್ಚು ಗಮನಹರಿಸುವುದು ಒಳಿತು ಎಂದರು.

ಮಾನವ ಲಭ್ಯವಿರುವ ಜ್ಞಾನವನ್ನು ಮಾನವ ಉಪಯುಕ್ತತೆಗಾಗಿ ಸದ್ಭಳಕೆ ಮಾಡುವುದೇ ಸಂಶೋಧನೆಯ ಸಿದ್ಧಾಂತವಾಗುತ್ತದೆ. ಸಂಶೋಧನೆಗಳು ಒಂದು ಕ್ಷೇತ್ರಕ್ಕೆ ಸೀಮಿತವಾಗಿರದೆ, ಸಮಸ್ಯೆಗಳಿಗೆ ತಕ್ಷಣ ಪರಿಹಾರವನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿದೆ. ಸಂಶೋಧನೆಗಳು ಆಳವಾಗಿ, ವಿಶ್ಲೇಷತ್ಮಕವಾಗಿ ಇರಬೇಕು ಹಾಗೂ ಒಂದು ನಿರ್ದಿಷ್ಟ ವಿಧಾನವನ್ನು ಅನುಸರಿಸುವುದೇ ವ್ಯವಸ್ಥೆ ಎಂದು ತಿಳಿಸಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಜನ ವಿದ್ಯಾಸಂಸ್ಥೆ (ರಿ.)  ಕಾರ್ಯದರ್ಶಿಗಳಾದ ಡಾ. ವಿಜಯಲಕ್ಷ್ಮಿ ಮುರಳೀಧರ್‍  ಮಾತನಾಡಿ, ಸಂಶೋಧನೆ ಎಂದರೆ ಹಳೆಯ ವಸ್ತುವನ್ನು ಹೊಸ ದೃಷ್ಟಿಯಲ್ಲಿ ನೋಡುವುದು, ಹೊಸತಾಗಿ ಅನ್ವೇಷಣೆ ಮಾಡುವುದು. ಸಂಶೋಧನೆಯಲ್ಲಿ ಹಳತನ್ನು ಬಿಟ್ಟು ಹೊಸತನ್ನು ನೋಡಲು ಸಾಧ್ಯವಿಲ್ಲ. ಸಂಶೋಧನೆಗೆ ಮುಖ್ಯವಾಗಿ ಸಂಶೋಧನಾ ಪ್ರಾಕಲ್ಪನೆ ಮುಖ್ಯವಾಗಿರುತ್ತದೆ. ಪ್ರಾಕಲ್ಪನೆಗೆ ಜ್ಞಾನದ ಪ್ರಭುತ್ವ, ವೈಯುಕ್ತಿಕ ಅನುಭವ, ದತ್ತಾಂಶ ಮತ್ತು ದಾಖಲೆಗಳ ಪರಿಶೀಲನೆ, ಸಂಬಂಧಿತ ಅಧ್ಯಯನಗಳ ಅವಲೋಕನ ಮತ್ತು ಹಿಂದಿನ ಅಧ್ಯಯನಗಳ ಅವಲೋಕನಗಳು ಸಂಶೋಧನೆಯ ಮುಖ್ಯ ಅಂಗವಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ನಡೆದ  ಭೀಕರ ಅಣುಬಾಂಬ್ ದುರಂತ ಮನಕಲಕುವ ಸ್ತಬ್ಧಚಿತ್ರಗಳ ಪ್ರದರ್ಶನವನ್ನು ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಕೆ.ಎಂ. ಮಹದೇವನ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ. ಎಸ್.ಆರ್. ರಮೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ವೆಂಕಟರಾಮು, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್. ಶ್ರೀಧರ, ಗ್ರಂಥಪಾಲಕರಾದ   ಎಂ. ವೀಣಾ, ಸ್ತಬ್ದಚಿತ್ರಗಳ ಪ್ರದರ್ಶನದ ಆಯೋಜಕರಾದ ಡಾ. ಇಂದ್ರಾಣಿ  ಉಪಸ್ಥಿತರಿದ್ದರು.

ಎಸ್‍ಡಿಎಂ-ಐಎಂಡಿಯ ಗ್ರಂಥಪಾಲಕರಾದ ಡಾ. ಸುನೀಲ್ ಎಂವಿ., ಪ್ರೊ. ಎಂ. ಮಿನಾಜ್, ಪ್ರಾಧ್ಯಾಪಕರು, ಎಸ್‍ಡಿಎಂ-ಐಎಂಡಿ, ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವ್ಯವಹಾರ ಆಡಳಿತ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಡಿ. ಆನಂದ್‍ರವರುಗಳು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: