ಪ್ರಮುಖ ಸುದ್ದಿಮೈಸೂರು

ಕೇರಳದಿಂದ ಬೆಂಗಳೂರಿಗೆ ಬರುವ ಕೊಚುವೇಲಿ ರೈಲು ಮೈಸೂರಿಗೆ ವಿಸ್ತರಣೆ ; ತಿಂಗಳೊಳಗೆ ಸೇವೆ ಆರಂಭ; ಸಂಸದ ಪ್ರತಾಪ್ ಸಿಂಹ

ಮೈಸೂರು,ಆ.8:- ಕೇರಳದಿಂದ ಬೆಂಗಳೂರಿಗೆ ಬರುವ ಕೊಚುವೇಲಿ ರೈಲನ್ನು ಮೈಸೂರಿನವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿಗೆ ಈ ಎಕ್ಸಪ್ರೆಸ್ ರೈಲನ್ನು ವಿಸ್ತರಿಸುವಂತೆ ಕೋರಿ ರೈಲ್ವೆ ಸಚಿವ ಪೀಯೂಶ್ ಗೋಯಲ್ ಅವರಿಗೆ ಪತ್ರ ಬರೆದಿದ್ದೆ. ಇದಕ್ಕೆ ಸ್ಪಂದಿಸಿರುವ ಸಚಿವರು 16315/16316 ಸಂಖ್ಯೆಯ ರೈಲು ಸೇವೆಯನ್ನು ಮೈಸೂರಿನವರೆಗೆ ವಿಸ್ತರಿಸಿದ್ದಾರೆ. ಇದರಿಂದ ಎರಡು ನಗರಿಗಳ ಸಂಪರ್ಕಕ್ಕೆ ಸಹಾಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ತಿಂಗಳೊಳಗೆ ಈ ಸೇವೆಯು ಆರಂಭವಾಗಲಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಲಿದ್ದಾರೆ. ಜೊತೆಗೆ ನವೀಕರಣಗೊಂಡಿರುವ ರೈಲು ನಿಲ್ದಾಣದ ಉದ್ಘಾಟನೆಯನ್ನೂ ನೆರವೇರಿಸಲಿದ್ದಾರೆ. ಸಂಸದನಾದ ಮೇಲೆ ಮೈಸೂರಿಗೆ ತರುತ್ತಿರುವ ಏಳನೇ ಹೊಸರೈಲು ಇದಾಗಿದೆ. ಈಗ ಮೈಸೂರಿನಿಂದ ಕೇರಳಕ್ಕೆ ನೇರ ರೈಲು ಸೇವೆ ದೊರೆತಂತಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಪ್ರವಾಸಿಗರ ಸ್ವರ್ಗ ಕೇರಳ ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವೆ ನೇರ ರೈಲು ಸಂಪರ್ಕ ಏರ್ಪಟ್ಟಂತಾಗಿದ್ದು, ಇತ್ತೀಚೆಗೆ ಉಡಾನ್-3 ಯೋಜನೆಯಡಿ ಮೈಸೂರಿನಿಂದ ಕೊಚ್ಚಿಗೆ ವಿಮಾನಯಾನ ಸಂಪರ್ಕ ಆರಂಭವಾಗಿತ್ತು. ಈಗಾಗಲೇ ಮೈಸೂರಿನಿಂದ ಹೈದ್ರಾಬಾದ್, ಚೆನ್ನೈಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ.

ಈ ಮೂಲಕ ದಕ್ಷಿಣ ರಾಜ್ಯದ ಪ್ರಮುಖ ನಗರಗಳಿಗೆ ಮೈಸೂರಿನಿಂದ ರೈಲ್ವೆ ಸಂಪರ್ಕ ದೊರೆತಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: