ಪ್ರಮುಖ ಸುದ್ದಿ

ಕೊಡಗಿನಲ್ಲಿ ನಿಲ್ಲದ ಪ್ರವಾಹ ಭೀತಿ : ಎಲ್ಲಿ ನೋಡಿದರಲ್ಲಿ ದಯನೀಯ ಸ್ಥಿತಿ : ಮಳೆಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ

ರಾಜ್ಯ(ಮಡಿಕೇರಿ) ಆ.8 :- ಕಳೆದ ನಾಲ್ಕು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಆರ್ಭಟಿಸುತ್ತಿರುವ ಆಶ್ಲೇಷ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಅನಾಹುತಗಳು ಸಂಭವಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಿಂದ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ.
ಜಿಲ್ಲೆಯ ಯಾವುದೇ ಭಾಗದಲ್ಲಿ ಕಣ್ಣು ಹಾಯಿಸಿದರು ಜಲಾವೃತ ಪ್ರದೇಶವೇ ಕಾಣುತ್ತಿದೆ. ಗ್ರಾಮಗಳಂತು ಬಹುತೇಕ ಕಡೆ ಮುಳುಗಡೆಯ ಭೀತಿಯನ್ನು ಎದುರಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಹಲವು ಕುಟುಂಬಗಳನ್ನು ಎನ್‍ಡಿಆರ್‍ಎಫ್ ತಂಡದ ಸಹಕಾರದಿಂದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಬುಧವಾರ ರಾತ್ರಿಯಿಂದ ಜಿಲ್ಲೆಯಾದ್ಯಂತ ತೀವ್ರಗೊಂಡ ಗುಡುಗು ಸಹಿತ ಭಾರೀ ಗಾಳಿ, ಮಳೆ ಅವಾಂತರವನ್ನೆ ಸೃಷ್ಟಿಸಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಗ್ರಾಮೀಣ ಪ್ರದೇಶವಲ್ಲದೆ, ಪಟ್ಟಣ ಪ್ರದೇಶಕ್ಕು ಪ್ರವಾಹದ ನೀರು ವ್ಯಾಪಿಸಿದ್ದು, ಕುಶಾಲನಗರ, ವೀರಾಜಪೇಟೆ, ಗೋಣಿಕೊಪ್ಪ, ಪೊನ್ನಂಪೇಟೆಯಲ್ಲಿರುವ ಬಹುತೇಕ ಬಡಾವಣೆಗಳು ಜಲ ಪ್ರಳಯದ ಅನುಭವವನ್ನು ಅನುಭವಿಸುತ್ತಿವೆ.
ಕಳೆದ 24 ಗಂಟೆಗಳ ಕಾಲ ನಿರಂತರವಾಗಿ ಗಾಳಿ ಸಹಿತ ಮಳೆ ಸುರಿದು ನೂರಾರು ಮರಗಳು ಧರೆಗುರುಳಿವೆ. ಕಾಫಿ ತೋಟ ಮತ್ತು ಗದ್ದೆ ಜಲಾವೃತಗೊಂಡಿದ್ದು, ಕೃಷಿಕರು ಕಳೆದ ವರ್ಷದಂತೆ ಈ ಬಾರಿಯೂ ನಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತ ಸುಮಾರು 3 ತಿಂಗಳ ಹಿಂದೆಯೇ ಅತಿವೃಷ್ಟಿ ಎದುರಾದರೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಂಡ ಹಿನ್ನೆಲೆ ಸಂಭವಿಸಬಹುದಾಗಿದ್ದ ಮತ್ತಷ್ಟು ಅನಾಹುತಗಳು ತಪ್ಪಿದಂತ್ತಾಗಿದೆ. ಅಪಾಯಕಾರಿ ಪರಿಸ್ಥಿತಿಯ ಪ್ರದೇಶದಲ್ಲಿ ವಾಸವಿದ್ದ ಗ್ರಾಮಸ್ಥರಿಗೆ ಮಳೆಗಾಲಕ್ಕೆ ಮೊದಲೆ ಸ್ಥಳಾಂತರಕ್ಕೆ ಸೂಚನೆ ನೀಡಿದ್ದರಿಂದ ಇಲ್ಲಿಯವರೆಗೆ ಮಾನವ ಜೀವ ಹಾನಿಯಾಗಿಲ್ಲ. ಉಳಿದಂತೆ ರಸ್ತೆ, ಸೇತುವೆ ಹಾನಿಗೀಡಾಗಿದ್ದು, ಅಧಿಕಾರಿಗಳ ತಂಡ ಹಾನಿ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ ಸಂಚಾರ ಮಾರ್ಗಗಳನ್ನು ಸುಗಮಗೊಳಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಎನ್‍ಡಿಆರ್‍ಎಫ್ ತಂಡ ಹೆಚ್ಚು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ದೋಣಿ, ರ್ಯಾಫ್ಟರ್ ಇನ್ನಿತರ ಪರಿಕರಗಳ ಸಹಾಯದಿಂದ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ ಪ್ರತಿಯೊಂದು ಪ್ರದೇಶಕ್ಕು ಭೇಟಿ ನೀಡಿ ಅಸಹಾಯಕ ಸ್ಥಿತಿಯಲ್ಲಿರುವವರಿಗೆ ಅಭಯ ನೀಡುತ್ತಿದ್ದಾರೆ.
ಈ ನಡುವೆ ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ಪ್ರವಾಹದ ಪರಿಸ್ಥಿತ ಮುಂದುವರೆದಿದೆ. ಈ ಹಿನ್ನೆಲೆ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಅವರುಗಳು ಶ್ರೀಭಗಂಡೇಶ್ವರ ದೇವಾಲಯದ ಮೆಟ್ಟಿನಲಿನವರೆಗೆ ಆವರಿಸಿರುವ ನದಿ ನೀರಿಗೆ ಗಂಗಾ ಪೂಜೆ ನೆರವೇರಿಸಿದರು. ಯಾವುದೇ ಅನಾಹುತಗಳು ಸಂಭವಿಸಿದಂತೆ ಮತ್ತು ಗಾಳಿ ಮಳೆ ಶಾಂತವಾಗುವಂತೆ ಪ್ರಾರ್ಥಿಸಿದರು.
ಮತ್ತೊಂದೆಡೆ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕುಶಾಲನಗರದ ಮುಳುಗಡೆ ಪ್ರದೇಶ ಸೇರಿದಂತೆ ಕ್ಷೇತ್ರ ವಿವಿಧೆಡೆ ಭೇಟಿ ನೀಡಿ ಮಳೆಹಾನಿಯನ್ನು ಪರಿಶೀಲಿಸಿದರು. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಕುಟುಂಬಗಳ ಯೋಗಕ್ಷೇಮ ವಿಚಾರಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: