ಪ್ರಮುಖ ಸುದ್ದಿ

ಅಪಾಯದಂಚಿನ ನಿವಾಸಿಗಳಿಗೆ ವಿವಿಧ ಪರಿಹಾರ ಕೇಂದ್ರಗಳಲ್ಲಿ ಆಶ್ರಯ

ರಾಜ್ಯ(ಮಡಿಕೇರಿ) ಆ.9 :- ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಭಾರೀ ಮಳೆಯಾಗುತ್ತಿದೆ. ಆಗಸ್ಟ್, 09 ರ ಬೆಳಗ್ಗೆ ವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ.
ಜಿಲ್ಲೆಗೆ ಜನವರಿ-2019 ರ ಮಾಹೆಯಿಂದ ಈವರೆವಿಗೆ 1,304.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 2,647.96 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಶೇ.49.26 ರಷ್ಟಿದೆ. ಆಗಸ್ಟ್, 06 ರಂದು ಜಿಲ್ಲೆಯಲ್ಲಿ 145.58 ಮಿ.ಮೀ.ಸರಾಸರಿ ಮಳೆಯಾಗಿರುತ್ತದೆ.
ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲಾಡಳಿತದಿಂದ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವು ಸ್ಥಳಗಳಲ್ಲಿ ಬರೆಗಳು ಜರಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ತೆರವುಗೊಳಿಸಲು ಕ್ರಮ ವಹಿಸಲಾಗಿದೆ.
ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸ್ಥಳದಲ್ಲಿ ಅಗ್ನಿಶಾಮಕ, ಗೃಹ ರಕ್ಷಕ ದಳದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು, ಫೈಬರ್ ಬೋಟ್ ಮತ್ತು ರಿವರ್ ರಾಫ್ಟ್ ಬಳಸಿ ಸಾರ್ವಜನಿಕರನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಿಸಲಾಗುತ್ತಿದೆ. ಹೋಂ ಗಾರ್ಡ್ ಸಿಬ್ಬಂದಿಗಳು ಸ್ಥಳದಲ್ಲಿ 24*7 ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಅಂಗನವಾಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಆಗಸ್ಟ್, 09 ರವರೆಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಗಳ ವಿವರ: ಕರಡಿಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆಶ್ರಯ ಪಡೆದ ಕುಟುಂಬಗಳ ಸಂಖ್ಯೆ 12, ಸಂತ್ರಸ್ತರ ಸಂಖ್ಯೆ 40, ಬೆಟ್ಟದಕಾಡು ಅಂಗನವಾಡಿ ಕೇಂದ್ರದಲ್ಲಿ ಆಶ್ರಯ ಪಡೆದ ಕುಟುಂಬಗಳ ಸಂಖ್ಯೆ 5 ಒಟ್ಟು ಸಂತ್ರಸ್ಥರ ಸಂಖ್ಯೆ 21, ನಾಪೋಕ್ಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದ ಕುಟುಂಬಗಳ ಸಂಖ್ಯೆ 2, ಒಟ್ಟು ಸಂತ್ರಸ್ತರ ಸಂಖ್ಯೆ 5. ಈ ಪರಿಹಾರ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಸಂತ್ರಸ್ತರಿಗೆ ಎಲ್ಲಾ ರೀತಿಯ ಮೂಲ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಬರೆ ಜರಿದು ರಸ್ತೆ ಸಂಚಾರಕ್ಕೆ ಅಡಚಣೆ ಮತ್ತು ಮರ ಬಿದ್ದು ಅಡಚಣೆ ಉಂಟಾಗಿದ್ದು ಸಂಬಂಧಪಟ್ಟ ಇಲಾಖೆಗಳಿಂದ ತುರ್ತು ಕ್ರಮವಹಿಸಿ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಬಿರುನಾಣಿ-ಮೃತ್ಯುಂಜಯ ದೇವಸ್ಥಾನ ರಸ್ತೆಯಲ್ಲಿ ಬರೆ ಜರಿದಿದ್ದು, ತೆರವುಗೊಳಿಸಲಾಗಿದೆ. ಬೆಟ್ಟಗೇರಿ ಗ್ರಾ.ಪಂ.ಭಗವತಿ ದೇವಸ್ಥಾನ ರಸ್ತೆ. ಬೆಟ್ಟಗೇರಿ ಗ್ರಾ.ಪಂ.ಪಾಲೂರು-ಬಕ್ಕ ರಸ್ತೆಯ ಕೆಮ್ಮಟ್ಟು ಜಂಕ್ಷನ್ ಬಳಿ ತಡೆಗೋಡೆ ಕುಸಿದಿದ್ದು, ತೆರವುಗೊಳಿಸಲು ಕ್ರಮ ವಹಿಸಲಾಗಿದೆ. ಸುಂಟಿಕೊಪ್ಪ ಹೋಬಳಿ ಚೇರಳ ಶ್ರೀಮಂಗಲ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು, ಎರಡು ಮನೆಗಳು ಅಪಾಯದ ಅಂಚಿನಲ್ಲಿದ್ದು, ಮನೆಯಲ್ಲಿ ವಾಸವಿದ್ದ ಕುಟುಂಬಗಳಿಗೆ ಆಹಾರ ಮತ್ತಿತರ ಸಾಮಾಗ್ರಿಗಳನ್ನು ವಿತರಿಸಿ ಸುರಕ್ಷತಾ ಸ್ಥಳಗಳಿಗೆ ಕಳುಹಿಸಲಾಗಿದೆ. ಗಾಳಿಬೀಡು ವ್ಯಾಪ್ತಿಯ ಕೋಳಿಗೂಡು ಎಂಬಲ್ಲಿ ಮನೆ ಮೇಲೆ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ. ಕಾಲೂರಿನಲ್ಲಿ ರಸ್ತೆ ವಿದ್ಯುತ್ ತಂತಿ ಬಿದ್ದಿದ್ದು, ತಕ್ಷಣವೇ ವಿದ್ಯುತ್ ಸರಬರಾಜು ನಿಲ್ಲಿಸಿ ಸೂಕ್ತ ಕ್ರಮ ವಹಿಸಲಾಗಿದೆ. ಕಾಲೂರು ರಸ್ತೆಯಲ್ಲಿ ಕುಂಬಾರನ ಮನೆ ಬಳಿ ಬರೆ ಜರಿದು ರಸ್ತೆ ಬಂದ್ ಆಗಿದ್ದು, ತೆರವುಗೊಳಿಸಲು ಕ್ರಮ ವಹಿಸಲಾಗಿದೆ ಬೆಟ್ಟಗೇರಿ-ಬೆಟ್ಟತ್ತೂರು ರಸ್ತೆಯಲ್ಲಿ ಬರೆ ಜರಿದು ರಸ್ತೆ ಸಂಚಾರ ಬಂದ್ ಆಗಿದ್ದು, ಮಣ್ಣನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ವಿರಾಜಪೇಟೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಚರಂಡಿಗಳಲ್ಲಿ ಮಳೆ ನೀರು ಹರಿದು ಹೋಗುವಂತೆ ಕ್ರಮ ವಹಿಸಲಾಗಿದೆ. ಮೇಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನವಗ್ರಾಮ ಮತ್ತು ಬಿಳಿಗೇರಿಯಲ್ಲಿ ಬರೆ ಕುಸಿದು ರಸ್ತೆ ಹಾನಿಯಾಗಿದ್ದು, ವಿದ್ಯುತ್ ಟ್ರಾನ್ಸ್‍ಫಾರ್ಮರ್ ಮೇಲೆ ಮರಬಿದ್ದು ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕ್ರಮ ವಹಿಸಲಾಗುತ್ತಿದೆ.
ಹೊದ್ದೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಿದ್ದು ಎನ್‍ಡಿಆರ್‍ಎಫ್ ತಂಡದಿಂದ ರಕ್ಷಣಾ ಕಾರ್ಯ ನಡೆಸಿ ಪ್ರವಾಹಕ್ಕೆ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ.
ಆಗಸ್ಟ್, 05 ರಂದು ಬೆಳಗ್ಗಿನ ಜಾವ ಕುಸಿದಿದ್ದ ಕೊಣನೂರು-ವಿರಾಜಪೇಟೆ-ಮಾಕುಟ್ಟ ರಾಜ್ಯ ಹೆದ್ದಾರಿ 91 ರಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಈ ರಸ್ತೆಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿದ್ದು, ಭಾರೀ ಮಳೆಯಾಗುತ್ತಿರುವುದರಿಂದ ಭೂ ಕುಸಿತ ಮತ್ತು ಮರಗಳು ಬೀಳುವ ಸಾಧ್ಯತೆ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ಅಲ್ಲದೆ ಗಾಳಿಬೀಡು-ಪಾಟಿ-ಕಾಲೂರು ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಈ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಗಾಳಿಬೀಡು-ಪಾಟಿ-ಕಾಲೂರು ಶಾಲೆ ರಸ್ತೆ ವ್ಯಾಪ್ತಿಯ ಗ್ರಾಮಸ್ಥರು ಈ ರಸ್ತೆಗೆ ಬದಲಾಗಿ ಕೆ.ನಿಡುಗಣೆ-ಹೆಬ್ಬೆಟ್ಟಗೇರಿ-ದೇವಸ್ತೂರು-ಕಾಲೂರು ರಸ್ತೆಯನ್ನು ಬಳಸುವಂತೆ ತಿಳಿಸಲಾಗಿದೆ.
ಅತೀವೃಷ್ಟಿಯಿಂದ ಆಗಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಆತಂಕ ಪಡುವ ಅಗತ್ಯವಿರುವುದಿಲ್ಲ. ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿವೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ 24*7 ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾಟ್ಸಪ್‍ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತಿದೆ.
ಜಿಲ್ಲಾ ಆರಕ್ಷಕ ಅಧೀಕ್ಷಕರು ಮತ್ತು ಜಿ.ಪಂ.ಸಿಇಒ ಅವರೊಂದಿಗೆ ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಅಲ್ಲದೆ ವಿರಾಜಪೇಟೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅತೀವೃಷ್ಠಿ ಸಂಬಂಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ:08272-221077 ಮತ್ತು ವಾಟ್ಸಪ್ ನಂ.8550001077 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: