ಪ್ರಮುಖ ಸುದ್ದಿ

ತಾಯಿಯ ಎದೆಹಾಲು ಶಿಶುವಿಗೆ ಅಮೃತವಿದ್ದಂತೆ : ಮಗುವಿನ ಆರೋಗ್ಯ ಸಂರಕ್ಷಣೆಗೆ ಡಾ.ಕಾರ್ಯಪ್ಪ ಕರೆ

ರಾಜ್ಯ(ಮಡಿಕೇರಿ) ಆ.9 :-ತಾಯಿಯ ಎದೆಹಾಲು ನವಜಾತ ಶಿಶುವಿಗೆ ಅಮೃತವಿದ್ದಂತೆ ಹಾಗೂ ಅತಿ ಅವಶ್ಯಕವಾದದ್ದು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಕಾರ್ಯಪ್ಪ ಅವರು ಪ್ರತಿಪಾದಿಸಿದ್ದಾರೆ.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ಗುರುವಾರ ನಗರದ ಜಿಲ್ಲಾ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಕಾರ್ಯಪ್ಪ ಅವರು ಮಗುವಿಗೆ 6 ತಿಂಗಳು ತುಂಬುವವರೆಗೆ ಕಡ್ಡಾಯವಾಗಿ ಎದೆ ಹಾಲು ಉಣಿಸಬೇಕು. ಎದೆ ಹಾಲಿನಿಂದ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವುದರೊಂದಿಗೆ ತಾಯಂದಿರಿಗೆ ಮಾರಕ ಕಾಯಿಲೆಗಳಾದಂತಹ ಕ್ಯಾನ್ಸರ್ ಹಾಗೂ ಹಲವು ರೋಗಗಳಿಂದ ರಕ್ಷಣೆ ನೀಡುತ್ತದೆ. ತಾಯಂದಿರು ನವಜಾತ ಶಿಶುವಿಗೆ 6 ತಿಂಗಳವರೆಗೆ ಬೇರೆ ಯಾವುದೇ ಆಹಾರವನ್ನು ನೀಡದೆ ಕೇವಲ ಎದೆಹಾಲಿನೊಂದಿಗೆ ಮಗುವನ್ನು ಪೋಷಿಸಬೇಕು ಎಂದು ಅವರು ತಿಳಿಸಿದರು.
ಮಗುವಿಗೆ ತಾಯಿ ಎದೆಹಾಲನ್ನು ನೀಡುವುದರಿಂದ ಆ ಮಗುವು ಭವಿಷ್ಯದಲ್ಲಿ ಯಾವುದೇ ತರನಾದ ರೋಗರುಜಿನಗಳಿಗೆ ತುತ್ತಾಗುವ ಸಂಭವ ಕಡಿಮೆ ಇರುತ್ತದೆ. ಉತ್ತಮ ಆರೋಗ್ಯದೊಂದಿಗೆ ಮಗುವಿನ ಬೆಳವಣಿಗೆ ಆದಲ್ಲಿ ರಾಷ್ಟ್ರದ ಆರೋಗ್ಯ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ವಿಶ್ವದಲ್ಲಿ ಶೇ.40ರಷ್ಟು ತಾಯಂದಿರು ಮಾತ್ರ ಮಕ್ಕಳಿಗೆ 6 ತಿಂಗಳು ಹಾಲು ಉಣಿಸುತ್ತಿದ್ದು, ಇದು ಅತ್ಯಂತ ಕಳವಳಕಾರಿ ವಿಷಯವಾಗಿದ್ದು, ಪ್ರತಿಯೊಬ್ಬ ತಾಯಿಯು ಮಗುವಿಗೆ 6 ತಿಂಗಳು ತುಂಬುವ ತನಕ ಕಡ್ಡಾಯವಾಗಿ ಸ್ತನ್ಯಪಾನ ಮಾಡಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಪುರುಷೋತ್ತಮ ಅವರು ಮಾತನಾಡಿ ಈ ವರ್ಷದ ವಿಶ್ವ ಸ್ತನ್ಯಪಾನ ಸಪ್ತಾಹದ ಘೋಷವಾಕ್ಯವು ಪೋಷಕರನ್ನು ಸಶಕ್ತಗೊಳಿಸಿ ಸ್ತನ್ಯಪಾನವನ್ನು ಸಕ್ರೀಯಗೊಳಿಸಿ ಎಂಬುದಾಗಿದೆ. ಪ್ರತೀ ಮಗುವಿನ ಆರೋಗ್ಯದ ಬೆಳವಣಿಗೆಯ ಮೇಲೆ ಪೋಷಕರ ಪಾತ್ರ ಮಹತ್ತರವಾಗಿದ್ದು, ಪ್ರತೀ ನವಜಾತ ಶಿಶುವಿನ ಪೋಷಕರು ಸ್ತನ್ಯಪಾನವನ್ನು 6 ತಿಂಗಳು ತುಂಬುವವರೆಗೆ ಕಡ್ಡಾಯವಾಗಿ ಬೇರೆ ಯಾವುದೇ ಆಹಾರವನ್ನು ನೀಡದೆ ಮಾಡಿಸಬೇಕು. ಹಾಗೂ ಸ್ತನ್ಯಪಾನದಿಂದಾಗಿ ಮಕ್ಕಳಿಗೆ ಅತಿಸಾರ ಭೇದಿ, ನಿರ್ಜಲೀಕರಣ, ವಾಂತಿಯಾಗುವುದು, ಬೆಳವಣಿಗೆ ಕುಂಠಿತವಾಗುವುದು, ಬುದ್ದಿಶಕ್ತಿ ಕುಂಠಿತವಾಗುವುದು, ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದರಿಂದ ರಕ್ಷಣೆ ನೀಡುತ್ತದೆ ಎಂದು ಅವರು ತಿಳಿಸಿದರು.
ಹಾಗೂ ತಾಯಿಯು ಮಗುವಿಗೆ ಯಾವ ರೀತಿ ಸ್ತನ್ಯಪಾನ ಮಾಡಿಸಬೇಕು ಎಂಬುದರ ಬಗ್ಗೆ ಭಿತ್ತಿ ಪತ್ರಗಳ ಮೂಲಕ ವಿವರಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್ ಅವರು ತಾಯಿಯ ಎದೆಹಾಲಿನ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳಿಂದ ತಾಯಿ ಹಾಲು ಪ್ರಾಮುಖ್ಯ ಹಾಗೂ 6 ತಿಂಗಳ ನಂತರ ಮಗುವಿಗೆ ನೀಡಬೇಕಾದ ಆಹಾರ ಪದಾರ್ಥಗಳ ಕುರಿತು ಅರಿವು, ನಾಟಕ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಆರ್‍ಸಿಎಚ್. ಅಧಿಕಾರಿ ಡಾ.ಗೋಪಿನಾಥ್, ಡಾ.ದಿವ್ಯರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ವೈದ್ಯಕೀಯ ವಿದ್ಯಾರ್ಥಿಗಳು ಇತರರು ಇದ್ದರು. ಮಕ್ಕಳ ವಿಭಾಗದ ಡಾ.ಮಾಲತೇಶ್ ಹಾವನೂರು ಅವರು ಸ್ವಾಗತಿಸಿ, ನಿರೂಪಿಸಿದರು. ಡಾ.ವೀರೇಂದ್ರ ಕುಮಾರ್ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: