ಕರ್ನಾಟಕಪ್ರಮುಖ ಸುದ್ದಿ

ಎಲ್‍ಕೆಜಿ, 1ನೇ ತರಗತಿಗೆ ಮಕ್ಕಳ ಶಾಲಾ ದಾಖಲಾತಿಗಾಗಿ ಹೊಸ ವಯೋಮಿತಿ ನಿಗದಿ; ಮುಂದಿನ ವರ್ಷದಿಂದ ಕಟ್ಟುನಿಟ್ಟಿನ ಜಾರಿ

ಬೆಂಗಳೂರು: ಒಂದನೇ ತರಗತಿಗೆ ದಾಖಲಾಗಲು ಬಯಸುವ ಮಕ್ಕಳ ವಯಸ್ಸು ಜೂನ್ ವೇಳೆಗೆ 5 ವರ್ಷ 10 ತಿಂಗಳು ತುಂಬಿರಬೇಕು. ಪೂರ್ವ ಪ್ರಾಥಮಿಕ ತರಗತಿಗೆ ದಾಖಲಾಗುವ ಮಕ್ಕಳಿಗೆ 3 ವರ್ಷ 10 ತಿಂಗಳು ತುಂಬಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ತಿಳಿಸಿದೆ.

ಈ ಹಿಂದಿನ ಸರ್ಕಾರಗಳು ನಿಗದಿಪಡಿಸಿದ್ದ ಮಕ್ಕಳ ದಾಖಲಾತಿ ವಯೋಮಿತಿ ಆದೇಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರದ್ದುಪಡಿಸಿದ್ದು, ಬರುವ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ದಾಖಲಾಗುವ ಮಕ್ಕಳ ವಯಸ್ಸು ಜೂನ್ ವೇಳೆಗೆ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು. ಹಾಗೆಯೇ ಪೂ‍ರ್ವ ಪ್ರಾಥಮಿಕ ತರಗತಿಗೆ ದಾಖಲಾಗ ಬಯಸುವ ಮಕ್ಕಳಿಗೆ 3 ವರ್ಷ 10 ತಿಂಗಳು ತುಂಬಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

5 ವರ್ಷ ತುಂಬಿದ ಕೂಡಲೇ ಪೋಷಕರು ಶಾಲೆಗೆ ಸೇರಿಸುತ್ತಾರೆ, ಮಕ್ಕಳು ಈ ವಯಸ್ಸಿಗೆ ಕಲಿಯಲು ಇನ್ನೂ ಶಕ್ತರಾಗಿರುವುದಿಲ್ಲ. ಆದರೆ ಹೊಸ ನಿಯಮದ ಪ್ರಕಾರ 5 ವರ್ಷ 10 ತಿಂಗಳು ಪೂರ್ಣಗೊಂಡಿದ್ದರೇ ಮಾತ್ರ ಶಾಲೆಗೆ ದಾಖಲಿಸಲು ಸಾಧ್ಯ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ ಆನಂದ್ ತಿಳಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಆದೇಶ ಜೂನ್ 2017 ರಿಂದ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ, 2016- 17ನೇ ಸಾಲಿನಲ್ಲಿ ಈಗಾಗಲೇ ದಾಖಲಾಗಿರುವ ಮಕ್ಕಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಹತ್ತನೇ ತರಗತಿ ಪೂರ್ಣಗೊಳಿಸುವ ವೇಳೆಗೆ ವಿದ್ಯಾರ್ಥಿಯ ವಯಸ್ಸು 16 ವರ್ಷವಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿಯಮಗಳ ಪ್ರಕಾರ 16 ವರ್ಷ ಪೂರ್ಣಗೊಂಡಿದ್ದರೇ ಮಾತ್ರ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಸಾಧ್ಯ. ಹೀಗಾಗಿ ಮಕ್ಕಳ ದಾಖಲಾತಿ ವಯೋಮಿತಿಯನ್ನು 5 ವರ್ಷ 10 ತಿಂಗಳಿಗೆ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

comments

Related Articles

error: