ಮೈಸೂರು

ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ : ಪ್ರೊ.ಜೆ.ಸೋಮಶೇಖರ್ ಸಲಹೆ

ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ  ಕುಲಸಚಿವ ಪ್ರೊ.ಜೆ. ಸೋಮಶೇಖರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆಯುತ್ತಿರುವ ಶ್ರೀಮತಿ ಪದ್ಮಜಾ ಪ್ರಸಾದ್ ಸ್ಮರಣಾರ್ಥ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗೆ ದೀಪ ‌ಬೆಳಗಿಸುವ ಮೂಲಕ ಚಾಲನೆ ‌ನೀಡಿದರು. ಬಳಿಕ ಮಾತನಾಡಿದ ಅವರು ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಿದ್ಯಾರ್ಥಿಯ ಮಾನಸಿಕ ಜ್ಞಾನ ಹೆಚ್ಚಲಿದೆ. ಸಾಂಸ್ಕೃತಿಕ ವೇದಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭಾ ಕೌಶಲ್ಯವನ್ನು ಹೊರಹಾಕಬಹುದು ಎಂದರು.

ವಾಟ್ಸ್ ಆ್ಯಪ್ ಯುಗದಲ್ಲೂ ಸಾಂಸ್ಕೃತಿಕ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರಲ್ಲದೇ, ತನ್ನ ಕಾಲೇಜು ದಿನಗಳನ್ನು ನೆನಪಿಸಿಕೊಂಡರು.ಆಗ ಯಾವ ರೀತಿ ವಿದ್ಯಾರ್ಥಿಗಳು ಸಮೂಹ ರಚಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮಹಾರಾಜ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಮನ್ನಣೆಯಿದೆ. ರಂಗಭೂಮಿ, ಸಿನಿಮಾ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಕ್ಷೇತ್ರಗಳಳ್ಲೂ ಇಲ್ಲಿ ಕಲಿತ ವಿದ್ಯಾರ್ಥಿಗಳಿದ್ದಾರೆ. ಮಹಾರಾಜ ಕಾಲೇಜು ಎಲ್ಲ ಕಲೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಸಾಂಸ್ಕೃತಿಕ ಕಲೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನೀತ, ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎನ್. ಪದ್ಮನಾಭ, ಆಡಳಿತಾಧಿಕಾರಿ ಲಿಂಬ್ಯಾನಾಯಕ್, ಪಠ್ಯೇತರ ಚಟುವಟಿಕೆಯ ಸಂಚಾಲಕ ಡಾ.ಎಸ್.ಟಿ.ರಾಮಚಂದ್ರ  ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: