ಮೈಸೂರು

ಮೈಸೂರಿನಾದ್ಯಂತ ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಆಚರಣೆ : ಪರಸ್ಪರ ಶುಭಾಶಯ ವಿನಿಮಯ ; ಪ್ರವಾಹಸಂತ್ರಸ್ಥರಿಗಾಗಿ ಧನ ಸಂಗ್ರಹ

ಮೈಸೂರು,ಆ.12:- ಮೈಸೂರಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮುಸಲ್ಮಾನರ ದೊಡ್ಡ ಹಬ್ಬವಾಗಿ ಬಕ್ರೀದ್‌ ಅಥವಾ ಈದುಲ್‌ ಅಧಾವನ್ನು ಜಗತ್ತಿನಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಇಸ್ಲಾಮೀ ಕ್ಯಾಲೆಂಡರ್‌ನ ದುಲ್‌ಹಜ್‌ ತಿಂಗಳ 10ರಂದು ಬಕ್ರೀದ್‌ ಆಚರಿಸಲಾಗುತ್ತದೆ. ವಿಶೇಷ ಪ್ರಾರ್ಥನೆ, ಪ್ರಾರ್ಥನೆಯ ಒಂದು ಭಾಗವಾಗಿ ದೇವರ ಸಂಪ್ರೀತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬುದನ್ನು ದೃಢಪಡಿಸಲು ಸಾಂಕೇತಿಕವಾಗಿ ಪ್ರಾಣಿ ಬಲಿ ನೀಡಿ ಆಪ್ತರು, ಬಡ ಬಗ್ಗರಿಗೆ ಹಂಚುವುದು ಹಬ್ಬದ ವೈಶಿಷ್ಟ್ಯವಾಗಿದೆ.

ಬಕ್ರೀದ್ ನ್ನು ತ್ಯಾಗ ಬಲಿದಾನದ ಸಂಕೇತವಾಗಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್ ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎಂದು ಆಚರಿಸಲಾಗುತ್ತಿದೆ ಎಂಬುದನ್ನು  ಇತಿಹಾಸ ತಿಳಿಸುತ್ತದೆ. ಅದರಂತೆ ಸೋಮವಾರ ಮುಂಜಾನೆಯಿಂದಲೇ ಹೊಸ ಬಟ್ಟೆ ತೊಟ್ಟು ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಸಂಬಂಧಿಕರೊಂದಿಗೆ ಜಮಾಯಿಸಿದ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರಲ್ಲದೇ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ತಿಲಕ್ ನಗರ, ಉದಯಗಿರಿ, ಮಹದೇವಪುರ, ರಾಜೀವ್ ನಗರ, ಗೌಸಿಯಾನಗರಗಳಲ್ಲಿಯೂ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.  ಒಬ್ಬರನ್ನೊಬ್ಬರು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಇಸ್ಲಾಂ ಧರ್ಮಗುರು ಸರ್ ಖಾಜಿ ಹಜರತ್ ಮೌಲಾನಾ ಮಹಮ್ಮದ್ ಉಸ್ಮಾನ್ ಶರೀಫ್ ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ವೇತ ವಸ್ತ್ರಧಾರಿಗಳಾಗಿದ್ದ ಸಹಸ್ರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವಿವಿಧ ಪ್ರಾರ್ಥನಾ ಮಂದಿರಗಳ ಮೌಲ್ವಿಗಳು, ಮುಖಂಡರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಕೊಡಗು-ಕೇರಳದಲ್ಲಿ  ಸಂಭವಿಸಿದ ಭೀಕರ ಪ್ರವಾಹಕ್ಕೆ ನಲುಗಿದ ಸಂತ್ರಸ್ಥರ ಜೀವನ ಪುನಃ ಮೊದಲಿನಂತೆ ಸರಿ ಹೋಗಲೆಂದು ಇದೇ ವೇಳೆ ಪ್ರಾರ್ಥಿಸಿದರಲ್ಲದೇ, ಅವರ ನೆರವಿಗಾಗಿ ಧನ ಸಂಗ್ರಹಿಸಿದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: