ಮೈಸೂರು

ಸೋಲಿಗರ ಹಾಡಿಗೆ ವಿದೇಶಿ ರಾಗ ಬೆರೆಸಿ ಹಾಡಿದ ವಿದೇಶಿ ಗಾಯಕರು

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೋಲಿಗ ಬುಡಕಟ್ಟು ಜನಾಂಗದ ಗೊರುಕನ ಹಾಡಿಗೆ ಡ್ರಮ್, ಗಿಟಾರ್, ವಯಲಿನ್ ಮೂಲಕ ಸೋಲಿಗರ  ರಾಗದೊಂದಿಗೆ ವಿದೇಶಿ ರಾಗವನ್ನು ಮಿಶ್ರಮಾಡಿ ಹಾಡಿದ ವಿದೇಶಿ ಗಾಯಕರು, ದೇಸಿ  ಕುಣಿತಕ್ಕೆ ಮೈ ಬಳುಕಿಸಿದ ಚಿಣ್ಣರು, ಅಲೆಅಲೆಯಾಗಿ ತೇಲಿಬಂದ ಸಂಗೀತ ಸ್ವರಕ್ಕೆ ಚಪ್ಪಾಳೆಯ ರಾಗಕೊಟ್ಟ ಎಳೆ ಕಂದಮ್ಮಗಳು

ಇವು ಪಟ್ಟಣದ ಎಸ್ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ ಟ್ರಿಯಾನ್ಸ್ ಸಂಸ್ಥೆಯ ವತಿಯಿಂದ ನಡೆದ ಸ್ತ್ರೀಸ್ವರ ಕಾರ್ಯಕ್ರಮದಲ್ಲಿ ಬುಡಕಟ್ಟು, ಭಾರತೀಯ ಹಾಗೂ ವಿದೇಶಿ ಮಹಿಳೆಯರು ನಡೆಸಿಕೊಟ್ಟ ಕಾರ್ಯಕ್ರಮದ ಪುಟ್ಟ ಝಲಕ್. ಭಾರತದಲ್ಲಿಯೇ ಮೊದಲ ಬಾರಿಗೆ ಬುಡಕಟ್ಟು ಜನಾಂಗ ವಾಸ ಮಾಡುವ ಸ್ಥಳಗಳಿಂದ ಅವರ ಸಂಗೀತ ಪ್ರಕಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಕಲೆಯನ್ನು ಪ್ರದರ್ಶಿಸುವ ಇಂತಹ ವಿಶೇಷ ಕಾರ್ಯಕ್ರಮಕ್ಕೆ ಎಸ್ಡಿವಿಎಸ್ ವಿದ್ಯಾಸಂಸ್ಥೆ ಸಾಕ್ಷಿಯಾಯಿತು.

ಟ್ರಿಯಾನ್ಸ್ ಸಂಸ್ಥೆಯ ಸಂಸ್ಥಾಪಕರಾದ ಅರುಣ್, ಸುಭಾಷ್ ಮಾತನಾಡಿ, ಬುಡಕಟ್ಟು ಜನರಲ್ಲಿನ ಸಂಗೀತವನ್ನು ಗುರುತಿಸಿ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯೂ ಸಹಕಾರ ನೀಡುವ ಭರವಸೆ ನೀಡಿದೆ. ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಮೊದಲಿಗೆ ಬಿಳಿಗಿರಿರಂಗನಬೆಟ್ಟದ ಸೋಲಿಗರಲ್ಲಿ ಹಾಡುಗಾರಿಕೆ ಗುರುತಿಸಿ, ಅಲ್ಲೇ ವಾಸ್ತವ್ಯ ಮಾಡಿ 15 ದಿನಗಳ ಕಾಲ ಅವರ ಹಾಡನ್ನು ಕಲಿತು ಅವರಿಗೆ ಅದೇ ಹಾಡಿಗೆ ವಿದೇಶಿ ಹಾಡುಗಳ ಸ್ಪರ್ಶ ನೀಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವಕಾಶ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ತಂಡದಲ್ಲಿ ಐವರು ಬುಡಕಟ್ಟು ಮಹಿಳೆಯರು, ಐದು ಜನ ಭಾರತೀಯ ಸಂಗೀತ ಕಲಾವಿದರು ಹಾಗೂ ಐವರು ವಿದೇಶಿ ಮಹಿಳಾ ಸಂಗೀತ ಕಲಾವಿದರು ಇರುತ್ತಾರೆ. ಇವರೊಂದಿಗೆ ಸಂಗೀತ ಕ್ಷೇತ್ರದಲ್ಲಿ ನುರಿತ ಕಲಾವಿದರೊಂದಿಗೆ ತರಬೇತಿ ನೀಡಲಾಗುತ್ತದೆ ಎಂದರು.

ತಂಡದಲ್ಲಿ ಯುಎಸ್, ನೇಪಾಳ, ಸ್ವೀಡನ್, ಮುಂಬೈ, ಕಲ್ಕತ್ತಾ, ಬೆಂಗಳೂರು, ಮೈಸೂರಿನ ಕಲಾವಿದರಿದ್ದು, ಇದರ ಜೊತೆಗೆ ಸೋಲಿಗರ ತಂಡವೂ ಇರಲಿದೆ. ಇದು ಮೊದಲ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಇನ್ನೂ ಮೂರು ಕಾರ್ಯಕ್ರಮಗಳು ನಡೆಯಲಿವೆ. ಹಾಗಾಗಿ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತ ಹಾಗೂ ಕಲೆಗಳ ವಿನಿಮಯಕ್ಕೆ ಹೊಸ ನಾಂದಿ ಬರೆಯಲಿದೆ ಎಂದರು.

ಎಸ್ಡಿವಿಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಪಿ. ವೀರಭದ್ರಪ್ಪ, ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಗಂಗಾಧರಸ್ವಾಮಿ, ಮುಖ್ಯ ಶಿಕ್ಷಕಿ ಎಲ್. ಶೃತಿ, ವಿವೇಕಾನಂದ ಸೇವಾ ಟ್ರಸ್ಟ್ ಮಲ್ಲೇಶ್, ಕಲಾವಿದರಾದ ಲರಿಸಾ, ಮಾಯಾ, ಜನವೀಫ್, ಸ್ಟೀಜುಧಾಮ, ಸಂಗೀತಾ, ಲಕ್ಷ್ಮಿ, ಸಿಮ್ರನ್, ಮಾಳವಿಕ, ಅಮ್ರಪಾಲಿ, ಪದ್ಮಾ, ಭಾಗ್ಯ, ಕಾವ್ಯ, ಮಂಜುಳಾ, ಉಮಾ, ರಾಧಿಕಾ, ರವೀಂದ್ರನಾಥ್, ಗೌರಮ್ಮ ಮಹದೇವಸ್ವಾಮಿ, ಗುಂಬಳ್ಳಿ ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.

Leave a Reply

comments

Tags

Related Articles

error: