ಪ್ರಮುಖ ಸುದ್ದಿಮೈಸೂರು

ಹಡಪದ ಅಪ್ಪಣ್ಣ ಜಯಂತಿ : ಮೆರವಣಿಗೆ ರದ್ದುಗೊಳಿಸಿ ‘ದೇಣಿಗೆ’

ಮೈಸೂರು,ಆ.12 : ರಾಜ್ಯದ ಬೀಕರ ನೆರೆ ಹಾವಳಿಗೆ ಮನೆಮಠ ಕಳೆದುಕೊಂಡು ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿದ್ದು, ಅಂತಹ ಸಂತ್ರಸ್ತರ ಸಹಾಯಕ್ಕೆ ಇಡೀ ರಾಜ್ಯವೇ ಒಗ್ಗಟ್ಟಿನಿಂದ ಸಹಾಯ ಹಸ್ತ ನೀಡಿದ್ದು, ಈ ನಿಟ್ಟಿನಲ್ಲಿ ಸವಿತಾ ಸಮಾಜವು ತನ್ನ ಅಳಿಲು ಸೇವೆಗೈಯಲಿದೆ ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀಹಡಪದ ಅಪ್ಪಣ್ಣ ಜಯಂತ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆಯನ್ನು ನೆರೆ ಹಿನ್ನಲೆಯಲ್ಲಿ ರದ್ದುಗೊಳಿಸಿದ್ದು, ಅದಕ್ಕೆ ತಗಲುತ್ತಿದ್ದ ಸುಮಾರು 50 ಸಾವಿರ ರೂ.ಗಳ ವೆಚ್ಚವನ್ನು ಜಿಲ್ಲಾಧಿಕಾರಿಗಳ ಮುಖಾಂತರ ನೆರೆ ಸಂತ್ರಸ್ತರಿಗೆ ದೇಣಿಗೆ ನೀಡುತ್ತೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಇದೇ ದಿ.13ರಂದು, ಬೆಳಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ಹಮ್ಮಿಕೊಂಡಿರುವ ಜಯಂತಿ ಸಭಾ ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿ.ಪಂ. ಅಧ್ಯಕ್ಷೆ ಪರಿಮಳ ಶ್ಯಾಂ, ಸಂಸದ ಪ್ರತಾಪ್ ಸಿಂಹ, ಶ್ರೀನಿವಾಸ್ ‍ಪ್ರಸಾದ್, ಸುಮಲತಾ ಅಂಬರೀಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗಿಯಾಗಲಿದ್ದು. ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಅಲ್ಲದೇ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಮಾಜ ಅತಿ ಹಿಂದುಳಿದಿದ್ದು, ಈಗಾಗಲೇ ಘೋಷಣೆಯಾಗಿರುವ ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿಗೆ 25 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಸಮಾಜವನ್ನು ಸಬಲೀಕರಣಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲಾ ಗೌರವಾಧ್ಯಕ್ಷ ವಿ.ರಾಜು, ಬನ್ನೂರು ಪುರಸಭಾ ಸದಸ್ಯೆ ಸೌಮ್ಯರಾಣಿ, ಟಿ.ನರಸೀಪುರ ಅಧ್ಯಕ್ಷ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಹರೀಶ್, ನಾಗೇಂದ್ರ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: