ಮೈಸೂರು

ರಾಜಮನೆತನಗಳು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ : ಪ್ರೊ.ಡೇವಿಡ್ ವಾಷ್‍ ಬ್ರೋಕ್

ದಕ್ಷಿಣ ಭಾರತವನ್ನಾಳಿದ ರಾಜಮನೆತನಗಳಲ್ಲಿ ಮೈಸೂರು ಹಾಗೂ ಹೈದರಾಬಾದ್ ರಾಜ ಮನೆತನಗಳು ಅತ್ಯಂತ ಪ್ರಮುಖವಾದವು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಯಲದ ಪ್ರೊ.ಡೇವಿಡ್  ವಾಷ್‍ ಬ್ರೋಕ್ ಅಭಿಪ್ರಾಯಪಟ್ಟರು.

ಶುಕ್ರವಾರ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವತಿಯಿಂದ ರಾಣಿಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತದಲ್ಲಿ ರಾಜಮನೆತನಗಳ ಅಧಿಕಾರ, ಪ್ರತಿರೋಧ ಮತ್ತು ಸಾರ್ವಭೌಮತ್ವ ಕುರಿತ ಎರಡು ದಿನಗಳ ಪ್ರೊ.ಅಚ್ಚುತರಾವ್ ಸ್ಮಾರಕ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಭವ್ಯ ಭಾರತದ ಇತಿಹಾಸದಲ್ಲಿ ನೂರಾರು ರಾಜ ಮನೆತನಗಳು ಆಡಳಿತ ನಡೆಸಿವೆ. ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ರಾಜಮನೆತನಗಳು ತಮ್ಮ ಪರಂಪರೆ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.

ದಕ್ಷಿಣ ಭಾರತದ ಇತಿಹಾಸಕ್ಕೆ ಬಂದರೆ ಮೈಸೂರು ಹಾಗೂ ಹೈದರಾಬಾದ್ ಸಂಸ್ಥಾನಗಳು ಹೆಚ್ಚಿನ ಪ್ರಾಬಲ್ಯ ಹೊಂದಿದ್ದವು. ಮೈಸೂರಿನ ಅರಸರು, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ, ಶಿಕ್ಷಣ, ಸಂಸ್ಕೃತಿ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಅಭಿವೃದ್ಧಿ ಸಾಧಿಸಲು ಶ್ರಮಿಸಿದರು. ಈ ಅವಧಿಯಲ್ಲಿ ಹೊಸ ಆವಿಷ್ಕಾರಗಳು, ಮೈನಿಂಗ್, ಎಲೆಕ್ಟ್ರಿಕಲ್ ಸೇರಿದಂತೆ ಹಲವು ಕೈಗಾರಿಕೆಗಳು ಆರಂಭವಾದವು. ಹಿಂದುಳಿದವರಿಗೆ, ಶೋಷಿತರಿಗೆ ಮೀಸಲಾತಿ ಸೇರಿದಂತೆ ಹೆಚ್ಚಿನ ಅವಕಾಶಗಳು ಸಿಗಲಾರಂಭಿಸಿದವು.  ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ವೈಜ್ಞಾನಿಕ ಬದಲಾವಣೆಗಳಾದವು. ಬೆಂಗಳೂರು ದೇಶದ 2ನೇ ಕೈಗಾರಿಕಾ ಪ್ರದೇಶವಾಗಿ ಗುರುತಿಸಲ್ಪಟ್ಟಿತು ಎಂದ ಅವರು, ಕಳೆದ 20-30 ವರ್ಷಗಳಲ್ಲಿ ಹಲವು ನಾಟಕೀಯ ಬೆಳವಣಿಗೆಗಳಾಗಿದ್ದು ಭಾರತ ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಪ್ರೊ. ಅಚ್ಚುತರಾವ್ ಜೀವನ ಮತ್ತು ಕೃತಿಗಳ ಪ್ರದರ್ಶನವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಯಶವಂತ ಡೋಂಗ್ರೆ, ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಅಧ್ಯಕ್ಷ ಪ್ರೊ.ಕೆ.ಸದಾಶಿವ, ಡಿ.ಎ.ಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: