ಪ್ರಮುಖ ಸುದ್ದಿ

ಮಳೆಹಾನಿ ಸಂಕಷ್ಟ : ಬಲವಂತದ ಸಾಲ ವಸೂಲಾತಿ ಬೇಡ : ಬಹುಜನ ಕಾರ್ಮಿಕರ ಸಂಘ ಒತ್ತಾಯ

ರಾಜ್ಯ(ಮಡಿಕೇರಿ) ಆ.13 : – ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಕಾರ್ಮಿಕರು ಕಳೆದ 10 ದಿನಗಳಿಂದ ಕೆಲಸ ಕಾರ್ಯವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಇವರುಗಳಿಗೆ ಆಹಾರ ಸಾಮಾಗ್ರಿಗಳನ್ನು ದೊರಕಿಸಲು ಮತ್ತು ಮೈಕ್ರೋ ಫೈನಾನ್ಸ್ ನಿಂದ ಪಡೆದಿರುವ ಸಾಲ ಮರುಪಾವತಿಗೆ ಇವರು ಚೇತರಿಸಿಕೊಳ್ಳುವವರೆಗೆ ಕಾನೂನಿನಡಿ ರಕ್ಷಣೆ ನೀಡಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಬಹುಜನ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಈ ಕುರಿತು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ಅವರು, ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗಿಂತಲೂ ಈ ಬಾರಿ ಭಾರೀ ಮಳೆಯಾದ ಪರಿಣಾಮ ಕೂಲಿ ಕಾರ್ಮಿಕರು ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಕಳೆದುಕೊಂಡಿದ್ದಾರೆ. ಮನೆಮಠಗಳು ನೀರಿನಿಂದ ಆವೃತವಾಗಿದ್ದು, ತೋಟ ಮಾಲಕರು ಕಾರ್ಮಿಕರಿಗೆ ಕೆಲಸ ನೀಡಲು ಹಿಂದೆಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಸಾರಿಗೆ ಸಂಪರ್ಕ ಕಡಿತಗೊಂಡ ಪರಿಣಾಮ ದಿನಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಪರಿಣಾಮವಾಗಿ ಕೂಲಿ ಕಾರ್ಮಿಕರು, ಜನಸಾಮಾನ್ಯರು ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಮನಸೆಳೆದಿದ್ದಾರೆ.
ನದಿ ದಡದಲ್ಲಿರುವ ಅದೆಷ್ಟೋ ಕೂಲಿಕಾರ್ಮಿಕರ ಮನೆಗಳು ನೀರು ಪಾಲಾಗಿದ್ದು, ಅವರು ಬದುಕು ಕಟ್ಟಿಕೊಳ್ಳಲು ಅದೆಷ್ಟೋ ದಿನಗಳು ಬೇಕಾಗಿವೆ. ತೋಟ ಕಾರ್ಮಿಕರಾಗಿ ದುಡಿಯುವ ಕಾರ್ಮಿಕ ವರ್ಗಕ್ಕೆ ಕಳೆದ 10 ದಿನಗಳಿಂದ ಕೆಲಸವಿಲ್ಲದೆ ಇತ್ತ ವೇತನವೂ ಇಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ. ಕೆಲವರು ಒಪ್ಪೊತ್ತಿನ ಊಟಕ್ಕಾಗಿ ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆದಿದ್ದು, ಇಂತಹ ಹಲವು ರೀತಿಯ ಸಮಸ್ಯೆಯಲ್ಲಿ ಕಾರ್ಮಿಕ ವರ್ಗ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸರಕಾರದ ಗಮನಸೆಳೆದು ಅಂತಹ ಕೂಲಿಕಾರ್ಮಿಕರಿಗೆ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ದೊರಕಿಸಿಕೊಡುವಂತಾಗಬೇಕು. ಅಲ್ಲದೆ ಮೈಕ್ರೋ ಫೈನಾನ್ಸ್‍ಗಳಿಂದ ಪಡೆದ ಸಾಲ ಮರುಪಾವತಿಗೆ ಫೈನಾನ್ಸ್ ಕಂಪೆನಿಗಳವರು ಒತ್ತಡ ಹೇರುತ್ತಿರುವುದರಿಂದ ಕೂಲಿಕಾರ್ಮಿಕರು ಚೇತರಿಸಿಕೊಳ್ಳಲು ಕನಿಷ್ಟ ಒಂದು ತಿಂಗಳ ಕಾಲಾವಕಾಶವನ್ನಾದರೂ ನೀಡುವಂತಾಗಬೇಕು. ಮತ್ತು ಅಂತಹ ಮೈಕ್ರೋ ಫೈನಾನ್ಸ್‍ನವರು ಈ ಒಂದು ತಿಂಗಳ ಅವಧಿಯವರೆಗೆ ಬಲವಂತವಾಗಿ ಸಾಲ ವಸೂಲು ಮಾಡದಂತೆ ಕಾನೂನಿನಡಿ ಕಾರ್ಮಿಕರಿಗೆ ರಕ್ಷಣೆ ಒದಗಿಸುವಂತಾಗಬೇಕು ಎಂದು ಮೊಣ್ಣಪ್ಪ ಒತ್ತಾಯಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: