ಕ್ರೀಡೆ

ಟೀಂ ಇಂಡಿಯಾ ಕೋಚ್: ಅಂತಿಮ ರೇಸ್ ನಲ್ಲಿ ಆರು ಮಂದಿಯ ಹೆಸರು

ನವದೆಹಲಿ,.13-ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಹುದ್ದೆಯ ಅಂತಿಮ ರೇಸ್ ನಲ್ಲಿ ಆರು ಮಂದಿಯ ಹೆಸರು ಕೇಳಿಬಂದಿದೆ.

ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಆರು ಮಂದಿಯ ಹೆಸರನ್ನು ಸಿದ್ಧಪಡಿಸಲಾಗಿದೆ. ನ್ಯೂಝಿಲೆಂಡ್ ಕೋಚ್ ಮೈಕ್ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಮತ್ತು ಶ್ರೀಲಂಕಾ ಕೋಚ್ ಟಾಮ್ ಮೂಡಿ, ವೆಸ್ಟ್ಇಂಡೀಸ್ ಮಾಜಿ ಆಲ್ರೌಂಡರ್ ಹಾಗೂ ಅಪ್ಘಾನಿಸ್ತಾನ ಕೋಚ್ ಫಿಲ್ ಸಿಮನ್ಸ್, ಭಾರತ ತಂಡದ ಮಾಜಿ ವ್ಯವಸ್ಥಾಪಕ ಲಾಲ್ಚಂದ್ ರಜಪೂತ್, ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ರೇಸ್ನಲ್ಲಿರುವ ಇತರ ಐವರು.

ಭಾರತ ಕ್ರಿಕೆಟ್ ದಂತಕಥೆ ಎನಿಸಿದ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಮುಂದೆ ಆರು ಮಂದಿ ತಮ್ಮ ಪ್ರಸ್ತುತಿಯನ್ನು ನೀಡಬೇಕಾಗುತ್ತದೆ. ಆರು ಮಂದಿ ಸಿಎಸಿ ಮುಂದೆ ಸಂದರ್ಶನಕ್ಕೂ ಹಾಜರಾಗಬೇಕಾಗುತ್ತದೆ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಾರಾಂತ್ಯದಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಕೋಚ್ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಕಪಿಲ್ದೇವ್ ಜತೆಗೆ ಅಂಶುಮಾನ್ ಗಾಯಕ್ವಾಡ್ ಹಾಗೂ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಕೂಡಾ ಸಲಹಾ ಸಮಿತಿಯಲ್ಲಿದ್ದಾರೆ.

ವಿಶ್ವಕಪ್ ಸೆಮಿಫೈನಲ್ ನಿರ್ಗಮನ ಹಿನ್ನೆಲೆಯಲ್ಲಿ ರವಿಶಾಸ್ತ್ರಿ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದರೂ, ಶಾಸ್ತ್ರಿಯವರನ್ನೇ ಕೋಚ್ ಆಗಿ ಮುಂದುವರಿಸಬೇಕು ಎಂದು ನಾಯಕ ವಿರಾಟ್ ಕೊಹ್ಲಿ, ವೆಸ್ಟ್ಇಂಡೀಸ್ ಪ್ರವಾಸ ಆರಂಭಕ್ಕೆ ಮುನ್ನ ಆಗ್ರಹಿಸಿದ್ದರು. ಮುಖ್ಯ ಕೋಚ್ ರವಿಶಾಸ್ತ್ರಿ ಜತೆಗೆ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಆಗಿ ಸಂಜಯ್ ಬಂಗರ್, ಫೀಲ್ಡಿಂಗ್ ಕೋಚ್ ಆಗಿ ಅರ್.ಶ್ರೀಧರ್ ಅಧಿಕಾರಾವಧಿಯನ್ನು 45 ದಿನಗಳ ಕಾಲ ವಿಸ್ತರಿಸಲಾಗಿತ್ತು. (ಎಂ.ಎನ್)

Leave a Reply

comments

Related Articles

error: