ಕರ್ನಾಟಕ

ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆ: ತನಿಖೆಗೆ ಡಿಸಿ ಆದೇಶ

ಉಡುಪಿ,ಆ.13- ಕುಂದಾಪುರ ತಾಲೂಕಿನ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಉಡುಪಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ  ಹೆಬ್ಸಿಬಾ ರಾಣಿ ಕೊರ್ಲಪಾಟಿ ಅಮೋನಿಯಾ ಸೋರಿಕೆ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದು, ತಪ್ಪು ಕಂಡು ಬಂದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆ ಕಂಡ್ಲೂರು ಪೊಲೀಸರು ಆಗಮಿಸಿ ಘಟನೆಯ ಕಾರಣಗಳನ್ನು ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ಮಲ್ಪೆ ಮೆರೈನ್ ಫಿಶ್ ಸ್ಟೋರೇಜ್ ನಲ್ಲಿ ಅಮೋನಿಯಾ ಲಿಕ್ವಿಡ್ ಸೋರಿಕೆಯಾಗಿ ಅರವತ್ತೇಳು ಮಹಿಳಾ ಕಾರ್ಮಿಕರು ಹಾಗೂ ಏಳು ಪುರುಷ ಕಾರ್ಮಿಕರು ಅಸ್ವಸ್ಥಗೊಂಡಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅಮೋನಿಯಾ ಲಿಕ್ವಿಡ್ ಬೆರೆತ ಗಾಳಿ ಸೇವಿಸಿದ ಪರಿಣಾಮ ಗಂಭೀರವಾಗಿ ಅಸ್ವಸ್ಥರಾಗಿದ್ದರು.

ಅಮೋನಿಯಾ ಲಿಕ್ವಿಡ್ ಇರಿಸಲಾಗಿದ್ದ ಚೇಂಬರ್ ನ ಪೈಪ್ ಲೀಕ್ ಆದ ಪರಿಣಾಮ ಈ ಘಟನೆ ನಡೆದಿತ್ತು. ಉಸಿರಾಟದ ಗಂಭೀರ ತೊಂದರೆ ಅನುಭವಿಸುತ್ತಿದ್ದ 74 ಕಾರ್ಮಿಕರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಕಾರ್ಖಾನೆ ಆರಂಭಕ್ಕೂ ಮುನ್ನ ಮತ್ತು ಬಳಿಕ ಸಾಕಷ್ಟು ಅಪಸ್ವರಗಳು ಕೇಳಿ ಬಂದಿದ್ದವು. ಕಾರ್ಮಿಕರಿಗೆ ಸಾಕಷ್ಟು ಸುರಕ್ಷತಾ ಕ್ರಮಗಳು ಇಲ್ಲಿಲ್ಲ ಎಂಬ ಆರೋಪಗಳೂ ಕೇಳಿ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಈ ಘಟನೆ ನಡೆದಿದೆ. ಉದ್ಯೋಗದ ಆಸೆಗೆ ಒಂದಿಷ್ಟು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿರುವಾಗಲೇ ಈ ಘಟನೆ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕುಂದಾಪುರ ಹೆಮ್ಮಾಡಿಯಲ್ಲಿ ನಡೆದ ಈ ದುರ್ಘಟನೆಯಿಂದ ಜಿಲ್ಲೆಯ ಇತರೆ ಮೀನು ಸಂಸ್ಕರಣಾ ಘಟಕಗಳ ಸುರಕ್ಷತೆಯ ಬಗ್ಗೆಯೂ ಸಾರ್ವಜನಿಕರಲ್ಲಿ ಅನುಮಾನಗಳು ಮೂಡತೊಡಗಿವೆ. (ಎಂ.ಎನ್)

Leave a Reply

comments

Related Articles

error: