ಪ್ರಮುಖ ಸುದ್ದಿ

ಪ್ರವಾಹ, ಮಳೆ ಸಂದರ್ಭ ಶಾಲೆಗಳಿಗೆ ರಜೆ : ರಜಾದಿನಗಳಲ್ಲಿಯೂ ಶಾಲೆ ತೆರೆದು ಸರಿದೂಗಿಸುವ ಚಿಂತನೆ ಶಿಕ್ಷಣ ಇಲಾಖೆ?

ರಾಜ್ಯ(ಬೆಂಗಳೂರು)ಆ.14:- ರಾಜ್ಯದ ಕೆಲವು ಪ್ರವಾಪೀಡಿತ ತಾಲೂಕುಗಳಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಮಳೆಯ ಕಾರಣದಿಂದಾಗಿ ಈಗಾಗಲೇ ಶಾಲಾ ಮಕ್ಕಳಿಗೆ ಸಾಕಷ್ಟು ರಜೆ ನೀಡಲಾಗಿದ್ದು,  ಮಳೆಯ ಸಂದರ್ಭದಲ್ಲಿ ಶಾಲಾ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕ್ರಮ ಕೈಗೊಂಡಿತ್ತು.

ಹಲವು ದಿನಗಳು ಶಾಲೆಗಳಿಗೆ ರಜೆ ನೀಡಿರುವುದರಿಂದ ಆ ದಿನಗಳ ಪಾಠಗಳನ್ನು ಮುಂದಿನ ರಜಾ ದಿನಗಳಲ್ಲಿ ಮತ್ತು ಶನಿವಾರ ಪೂರ್ತಿ ದಿನ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಏಪ್ರಿಲ್ ನಲ್ಲಿ ನಿಗದಿಪಡಿಸಿದಂತೆ ತರಗತಿಗಳು ಮುಂದುವರಿಯಲಿವೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದಲ್ಲಿ ಹಲವು ಜನರು ಮನೆ-ಮಠ ಕಳೆದುಕೊಂಡಿರುವುದರಿಂದ ಅನೇಕ ಕಡೆ ಶಾಲೆಗಳನ್ನು ನಿರಾಶ್ರಿತ ಕೇಂದ್ರಗಳನ್ನಾಗಿ ಮಾಡಲಾಗಿದೆ. ಇನ್ನೊಂದೆಡೆ ಕೆಲವು ಶಾಲೆಗಳು ಕೂಡ ಭಾರೀ ಮಳೆಗೆ ಕುಸಿದು ಹೋಗಿ ನಾಶವಾಗಿದೆ. ಇಲ್ಲಿನ ಮಕ್ಕಳ ಶಿಕ್ಷಣ ವ್ಯವಸ್ಥೆಗೆ  ಸರ್ಕಾರ ಬದಲಿ ತುರ್ತು ವ್ಯವಸ್ಥೆ ಮಾಡಬೇಕಿದೆ.  ಪ್ರವಾಹವುಂಟಾಗಿ ಸಾವು, ನೋವು, ನಷ್ಟ ಉಂಟಾದ ಕಡೆಗಳಲ್ಲಿನ ಮಕ್ಕಳು ಸೇರಿದಂತೆ ಜನರ ಆರೋಗ್ಯ ಸ್ಥಿತಿಗತಿ ಕಾಪಾಡುವುದು ಸದ್ಯಕ್ಕೆ ಸವಾಲಿನ ಪ್ರಶ್ನೆಯಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ ಜಿ ಜಗದೀಶ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಪ್ರವಾಹ, ವಿಪತ್ತಿನ ಸಂದರ್ಭದಲ್ಲಿ ಶಾಲೆ ನಡೆಸುವ ಬಗ್ಗೆ ತೀರ್ಮಾನ ಪ್ರಮುಖ ವಿಷಯವಾಗುವುದಿಲ್ಲ. ಪ್ರವಾಹ ಹಿನ್ನಲೆಯಲ್ಲಿ ಮಾಡಲಾಗದ ತರಗತಿಗಳಿಗೆ ಪರಿಹಾರವಾಗಿ ಮುಂದಿನ ದಿನಗಳಲ್ಲಿ ಯಾವಾಗ ತರಗತಿ ನಡೆಸಬಹುದು ಎಂದು ತೀರ್ಮಾನ ಮಾಡಲು ವಲಯ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯೋಪಾಧ್ಯಾಯರುಗಳ ವಿವೇಚನೆಗೆ ಬಿಡಲಾಗಿದೆ. ಜಿಲ್ಲಾಡಳಿತದೊಂದಿಗೆ ಸಹಕರಿಸಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

ಮಳೆ ನೀರಿನಲ್ಲಿ ಮಕ್ಕಳು ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನ ಸಾಮಗ್ರಿಗಳನ್ನು ಕಳೆದುಕೊಂಡಿದ್ದರೆ ಇದೇ 16ರೊಳಗೆ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆಡಳಿತ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: