ಪ್ರಮುಖ ಸುದ್ದಿಮೈಸೂರು

ನಂಜನಗೂಡು ಪಟ್ಟಣದ ಪರಿಹಾರಕೇಂದ್ರಗಳಿಗೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಭೇಟಿ : ಸಮಸ್ಯೆ ಆಲಿಕೆ

ಮೈಸೂರು,ಆ.14:-  ಕಪಿಲಾ ನದಿಯಲ್ಲಿ  ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಮುಳುಗಡೆಯಾದ ಪ್ರದೇಶಕ್ಕೆ ನಿನ್ನೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಂಸದ ಶ್ರೀನಿವಾಸ್ ಪ್ರಸಾದ್ ನಂಜುಂಡೇಶ್ವರ  ದೇವಾಲಯದ ತಗ್ಗು ಪ್ರದೇಶದಲ್ಲಿ ನುಗ್ಗಿದ ಭಾರೀ ನೀರಿಗೆ ಹಾನಿಗೊಳಗಾದ ಸಂತ್ರಸ್ತರು ತಂಗಿರುವ ಡಾ.ಜಿ.ಆರ್.ಅಂಬೇಡ್ಕರ್ ಭವನ,ಶಂಕರಮಠ ಮತ್ತು ಸೀತಾರಾಮ ಕಲ್ಯಾಣ ಮಂಟಪಗಳಲ್ಲಿ ಸ್ಥಾಪಿತವಾಗಿರುವ ಗಂಜಿ(ಪರಿಹಾರ) ಕೇಂದ್ರಗಳಿಗೆ ತೆರಳಿ ಸಂತ್ರಸ್ತರ ಜೊತೆ ಮಾತುಕತೆ ನಡೆಸಿ ಧೈರ್ಯ ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರೇ ನಿಮ್ಮ ಮನೆಯ ಬಾಗಿಲಿಗೆ ಬಂದು ವೀಕ್ಷಣೆ ಮಾಡಿ ಈಗಾಗಲೇ ಮನೆ ಕಳೆದುಕೊಂಡ ಫಲಾನುಭವಿಗಳಿಗೆ 5 ಲಕ್ಷ ಮತ್ತು ಅಲ್ಪ ಪ್ರಮಾಣದಲ್ಲಿ ಮನೆಗೆ ಡ್ಯಾಮೇಜ್ ಆಗಿರುವುದಕ್ಕೆ 2 ಲಕ್ಷ ಮತ್ತು ಬಾಡಿಗೆ ಮನೆಗೆ ತೆರಳಿದರೆ ಮನೆ ಕಟ್ಟುವ ತನಕ 5000ರೂ. ಪ್ರತಿ ತಿಂಗಳಿಗೆ ಪಾವತಿ ಮಾಡಲಾಗುತ್ತದೆ ಎಂದು ಇಲ್ಲಿಗೆ ಆಗಮಿಸಿ ತಿಳಿಸಿದ್ದಾರೆ.

ಪ್ರವಾಹದ ಭಾರೀ ನೀರಿಗೆ ಈಗಾಗಲೆ ಆಸ್ತಿಪಾಸ್ತಿ ಮನೆ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ನಿಮ್ಮ ಜೀವನ ಸರಿ ಹೋಗುವ ತನಕ ಸದಾ ನಿಮ್ಮ ಜೊತೆ ನಾವಿದ್ದೇವೆ ಎಂದು ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಧಿಕಾರಿಗಳ ಮತ್ತು ಸಂತ್ರಸ್ಥರ ಜೊತೆ ಸಭೆ ನಡೆಸಿದರಲ್ಲದೇ, ಧೈರ್ಯ ತುಂಬುವ ಕೆಲಸ ಮಾಡಿದರು. ತಾಲೂಕಿನ ತಹಶೀಲ್ದಾರ್ ಮಹೇಶ್ ಕುಮಾರ್ ಮತ್ತು ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆಯನ್ನು ಅಂಬೇಡ್ಕರ್ ಸಮುದಾಯ ಭವನದಲ್ಲಿ  ಕರೆಯಲಾಗಿತ್ತು.

ನಂಜನಗೂಡು ಪಟ್ಟಣದಲ್ಲಿ ನಡೆದಿರುವ ಪ್ರವಾಹದ ಘೋರ ದುರಂತಕ್ಕೆ ಅಧಿಕಾರಿಗಳು ಸ್ಪಂದಿಸಿ ಅವರ ಜೀವನ ಮಟ್ಟ ಸುಧಾರಣೆ ಆಗುವ ತನಕ ಅವರ ಜೊತೆ ಸದಾಕಾಲ ಇರಬೇಕು. ಅವರ ಆಗು ಹೋಗುಗಳ ಬಗ್ಗೆ ಪರಿಶೀಲನೆ ಮಾಡಿ ಸರ್ಕಾರದಿಂದ ಪರಿಹಾರ ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕು. ಯಾವುದೇ ಕುಂದು ಕೊರತೆ ಇಲ್ಲದ ಹಾಗೆ ಅವರು ವಾಸ್ತವ ಸ್ಥಿತಿಗೆ ಬರುವ ತನಕ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮತ್ತು ಶಾಸಕ ಬಿ.ಹರ್ಷವರ್ಧನ್ ಅವರುಗಳು ಅಧಿಕಾರಿಗಳಿಗೆ ಎಚ್ಚರಿಕೆ  ನೀಡಿದರು. ತಾಲ್ಲೂಕು ತಹಶೀಲ್ದಾರ್ ಮಹೇಶ್ ಕುಮಾರ್ ಅವರಿಗೆ ಪಟ್ಟಣ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಅನಾದಿ ಕಾಲದ ಮಣ್ಣಿನ ಗೋಡೆಯಲ್ಲಿ ನಿರ್ಮಿಸಿದ ವಾಸದ ಮನೆಗಳು ನೆಲಕಚ್ಚಿವೆ. ತಾಲೂಕಿನಲ್ಲಿ ಬೆಳೆ ಹನಿ ಸಾಕಷ್ಟು ಆಗಿದೆ. ಇದರ ಬಗ್ಗೆ ಸೂಕ್ಷ್ಮತೆಯಿಂದ ಪರಿಶೀಲನೆ ಮಾಡಿ ರೈತರು ಮತ್ತು ಸಾರ್ವಜನಿಕ ವಾಸಿಗಳಿಗೆ ಯಾವುದೇ ಸಮಸ್ಯೆ ಇಲ್ಲದೆ ಈ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: