ದೇಶ

ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ನವದೆಹಲಿ,ಆ.14-ಅತ್ಯಾಚಾರ ಆರೋಪ ಎದುರಿಸುತ್ತಿರುವ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಕೊಲೆಗೆ ಸಂಚು ರೂಪಿಸಿದ ಸಂಬಂಧ ಕೊಲೆ ಪ್ರಕರಣವನ್ನು ಹೆಚ್ಚುವರಿಯಾಗಿ ದಾಖಲಿಸಲಾಗಿದೆ.

ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು ಎರಡೂ ಪ್ರಕರಣಗಳನ್ನು ಜತೆಗೂಡಿಸಿದ್ದು, ಒಂದು ಪ್ರಕರಣದಲ್ಲಿ ಸಂತ್ರಸ್ತೆಯ ತಂದೆಯ ಮೇಲೆ ಕೊಲೆ ಮಾಡಿದ ಆರೋಪ ಹೊರಿಸಿದ್ದರೆ ಇನ್ನೊಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಬಗ್ಗೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ ಆರೋಪವಿದೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 302 (ಕೊಲೆ), 506 (ಅಪರಾಧ ಉದ್ದೇಶ), 341 (ಅಕ್ರಮವಾಗಿ ಕೂಡಿ ಹಾಕಿದ್ದು) 120ಬಿ (ಅಪರಾಧ ಪಿತೂರಿ) ಮತ್ತು 193 (ಸುಳ್ಳು ಪುರಾವೆ) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಅನ್ವಯ ಸೆಂಗಾರ್ ಹಾಗೂ ಇತರ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಏತನ್ಮಧ್ಯೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಮಖಿ ಠಾಣೆಯ ಮೂವರು ಪೊಲೀಸ್ ಅಧಿಕಾರಿಗಳಾದ ಅಶೋಕ್ ಸಿಂಗ್ ಬಡೂರಿಯಾ, ಕುಮತಾ ಪ್ರಸಾದ್ ಹಾಗೂ ಅಮೀರ್ ಖಾನ್ ಅವರ ಜಾಮೀನು ಅರ್ಜಿಗಳನ್ನು ರದ್ದುಪಡಿಸಿದ ನ್ಯಾಯಾಲಯ, ಅವರ ವಿರುದ್ಧ ಕೊಲೆ ಆರೋಪ ಹೊರಿಸಿ ನ್ಯಾಯಾಂಗ ಬಂಧನ ವಿಧಿಸಿದೆ. (ಎಂ.ಎನ್)

Leave a Reply

comments

Related Articles

error: