ಮೈಸೂರು

73ನೇ ಸ್ವಾತಂತ್ರ್ಯ ದಿನಾಚರಣೆ  : ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಕಟ್ಟುನಿಟ್ಟಿನ ಸೂಚನೆ

ಮೈಸೂರು,ಆ.14:- 15-08-2019 ರಂದು 73ನೇ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರು ಕೆಲವು  ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತರಾದ ಕೆ.ಟಿ.ಬಾಲಕೃಷ್ಣ ಕೋರಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ನಗರದ ಶಾಲಾ ಮತ್ತು ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರು  ಸ್ವಾತಂತ್ರ್ಯ ದಿನಾಚರಣೆ ನಡೆಯುವ ಸಮಯದಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಭದ್ರತೆಗಾಗಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕು. ಶಾಲಾ ಕಾಲೇಜು ಆವರಣವನ್ನು ಕೂಲಂಕುಶವಾಗಿ ಪರಿಶೀಲಿಸಬೇಕು, ಶಾಲಾ, ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಯಾವುದೇ ವಾರಸುದಾರರು ಇಲ್ಲದ ಬ್ಯಾಗ್‍ಗಳು, ಪೊಟ್ಟಣ, ಆಟಿಕೆ ಸಾಮಾನುಗಳು ಹಾಗೂ ಇತರೆ ವಸ್ತುಗಳು ಕಂಡುಬಂದಲ್ಲಿ ಅದನ್ನು ಮುಟ್ಟದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅಪರಿಚಿತರು ಅನುಮಾನಾಸ್ಪದ ವಸ್ತುಗಳನ್ನು ತಂದಾಗ ಅವುಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ  ಪ್ರವೇಶ ನೀಡಬೇಕು ಎಂದಿದ್ದಾರೆ.

ಸಾರ್ವಜನಿಕ ಸ್ಥಳಗಳಾದ ಮಾಲ್‍ಗಳು, ಮಾರುಕಟ್ಟೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಏರ್‍ಪೋರ್ಟ್,   ಪೂಜಾ ಸ್ಥಳಗಳು,  ಪ್ರಾರ್ಥನಾ ಸ್ಥಳಗಳು, ಪ್ರವಾಸಿ ಸ್ಥಳಗಳಲ್ಲಿ ಹಾಗೂ ಹೆಚ್ಚಿನ ಜನನಿಬಿಡ ಪ್ರದೇಶಗಳಲ್ಲಿ  ಮಾಲೀಕರು/ವ್ಯವಸ್ಥಾಪಕರು ಸೂಕ್ತ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಬೇಕು.

ಮನೆ ಮಾಲೀಕರು ಯಾರಿಗಾದರೂ ಬಾಡಿಗೆಗೆ/ಭೋಗ್ಯಕ್ಕೆ ಮನೆಗಳನ್ನು ನೀಡುವಾಗ ಬಾಡಿಗೆದಾರರ/ಭೋಗ್ಯ ನೀಡುವವರ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಹೋಟೆಲ್, ವಸತಿ ಗೃಹ, ಲಾಡ್ಜ್‍ಗಳ ಮಾಲೀಕರು ಪ್ರವಾಸಿಗರಿಗೆ ಮತ್ತು ಇತರರಿಗೆ ರೂಂ.ಗಳನ್ನು ನೀಡುವಾಗ ಅವರ ಬಗ್ಗೆ ಹಾಗೂ ಅವರ ತಂದಿರುವ ಲಗ್ಗೇಜ್‍ಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಪೂರ್ಣ ವಿಳಾಸದ ಮಾಹಿತಿ ಪಡೆದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪ್ಲಾಸ್ಟಿಕ್ ಧ್ವಜಗಳ ಬಳಕೆಯನ್ನು ನಿಷೇಧಿಸಲಾಗಿದೆ. ಧ್ವಜಗಳಿಗೆ ಅಗೌರವ ತೋರುವುದು ಶಿಕ್ಷಾರ್ಹವಾಗಿದೆ ಎಂದಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಕವಾಯತು ನಡೆಯುವ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಲೋಹಶೋಧಕ ಯಂತ್ರಗಳನ್ನು ಅಳವಡಿಸಿದ್ದು, ಸಾರ್ವಜನಿಕರು ಲೋಹಶೋಧಕ ಯಂತ್ರದ ಮೂಲಕ ತಪಾಸಣೆಗೆ ಒಳಪಟ್ಟು ನಂತರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಬೇಕು.

ಬನ್ನಿಮಂಟಪ ಕವಾಯಿತು ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವವರು ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರೀತಿಯ ಆಯುಧಗಳು, ಚಾಕು, ಕ್ಯಾಮರಾ, ನೀರಿನ ಗಾಜಿನ ಬಾಟಲಿ ಮತ್ತು ದೊಡ್ಡ ಬ್ಯಾಗ್‍ಗಳನ್ನು ತೆಗೆದುಕೊಂಡು ಬರಬಾರದು. ಕವಾಯತು ಮತ್ತು ಕಾರ್ಯಕ್ರಮಗಳು ನಡೆಯುವ ಆವರಣಕ್ಕೆ ಸಾರ್ವಜನಿಕರು ಪ್ರವೇಶಿಸಬಾರದು. ನಿಗದಿಪಡಿಸಿದ ಸ್ಥಳದಲ್ಲೇ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಬೇಕು ಎಂದಿದ್ದಾರೆ.

15-08-2019 ರಂದು ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ದಿನಾಚಾರಣೆಯ ಸಂಬಂಧ ಸಾರ್ವಜನಿಕರಿಗೆ ಪ್ರವೇಶ ಮತ್ತು ವಾಹನಗಳಿಗೆ ಪಾರ್ಕಿಂಗ್‍ಗೆ ಈ ರೀತಿ ಅವಕಾಶ ಕಲ್ಪಿಸಲಾಗಿದೆ.

15-08-2019 ರಂದು ಮೈಸೂರು ನಗರದ ಬನ್ನಿಮಂಟ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ದಿನಾಚಾರಣೆಯ ಸಂಬಂಧ ಬನ್ನಿಮಂಟಪ ಮೈದಾನದಲ್ಲಿ ಗೌರವಾನ್ವಿತ ನ್ಯಾಯಾಧೀಶರು, ಅತಿ ಗಣ್ಯರು, ಗಣ್ಯರು, ಮಹಾನಗರ ಪಾಲಿಕೆ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರುಗಳು ಬನ್ನಿಮಂಟಪ ಮುಖ್ಯದ್ವಾರದ ಮುಖೇನ ಪ್ರವೇಶಿಸಬೇಕು. ಪಾರ್ಕಿಂಗ್ ವ್ಯವಸ್ಥೆಯನ್ನು  ಮುಖ್ಯದ್ವಾರದ  ಬಲಭಾಗ ಹಾಗೂ ಎಡಭಾಗದಲ್ಲಿ ಕಲ್ಪಿಸಲಾಗಿದೆ.

ಗೇಟ್ ಜಿ-2 ನಲ್ಲಿ ಪೊಲೀಸ್ ಇಲಾಖೆ ಹಾಗೂ ಪತ್ರಿಕೆ ಮತ್ತು ಮಾಧ್ಯಮದ ವಾಹನಗಳಿಗೆ ಹಾಗೂ ಇತರೆ ಇಲಾಖೆ ವಾಹನಗಳಿಗೆ ಪಾರ್ಕಿಂಗ್ ಕಲ್ಪಿಸಲಾಗಿದೆ.  ಗೇಟ್ ಜಿ-5 ನಲ್ಲಿ ಸಾರ್ವಜನಿಕರ ದ್ವಿಚಕ್ರ ವಾಹನಗಳಿಗೆ, ಕಾರುಗಳಿಗೆ ಪ್ರವೇಶ ಹಾಗೂ ಪಾರ್ಕಿಂಗ್ ಕಲ್ಪಿಸಲಾಗಿದೆ. ಗೇಟ್ ಜಿ-8 ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರವೇಶ ಹಾಗೂ ಪಾರ್ಕಿಂಗ್ ಅವಕಾಶವಿದೆ.  ನಿಗದಿಪಡಿಸಿದ ಪ್ರವೇಶ ದ್ವಾರಗಳಿಂದ ಹೊರತುಪಡಿಸಿ, ಬೇರೆ ಕಡೆಗಳಿಂದ ಸಾರ್ವಜನಿಕರು ಪ್ರವೇಶಿಸತಕ್ಕದ್ದಲ್ಲ. ಸಾರ್ವಜನಿಕರು ತಮ್ಮ ವಾಹನಗಳನ್ನು ಸಂಚಾರ ನಿಯಂತ್ರಣ ಪೊಲೀಸರು ನಿಗದಿಪಡಿಸಿದ ಸ್ಥಳದಲ್ಲೇ ನಿಲುಗಡೆ ಮಾಡಬೇಕು.

ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿಯಲ್ಲಿ ಪಾರ್ಕಿಂಗ್ ಮಾಡುವ ವಾಹನಗಳ ಮಾಲೀಕರ  ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: