
ಪ್ರಮುಖ ಸುದ್ದಿ
ಸಂತ್ರಸ್ತರ ಬದುಕು ರೂಪಿಸಲು ನಿಮ್ಮ ಜೊತೆ ನಾವಿದ್ದೇವೆ : ಸಿಎಂ ಬಿಎಸ್ ವೈಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪತ್ರ
ರಾಜ್ಯ(ಬೆಂಗಳೂರು)ಆ.14:- ಕಂಡರಿಯದ ಪ್ರವಾಹಕ್ಕೆ ರಾಜ್ಯ ನಲುಗಿದ್ದು, ಲಕ್ಷಾಂತರ ಜನರು ಬದುಕು ಬೀದಿಗೆ ಬಂದಿದೆ. ಸಚಿವ ಸಂಪುಟ ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಒಬ್ಬರೇ ನೆರೆ ಸಂತ್ರಸ್ತರ ಕಷ್ಟವನ್ನಾಲಿಸುತ್ತಿದ್ದು, ಅಧಿಕಾರಿಗಳಿಗೆ ಸೂಚನೆ ನೀಡುತ್ತ ಎಡೆಬಿಡದೆ ಓಡಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಏಕಾಂಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರ ಕಾರ್ಯಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ ಶ್ಲಾಘಿಸಿದ್ದು, ನಿಮಗೆ ಬೆಂಬಲವಾಗಿ ನಾವಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯದ ಮುಕ್ಕಾಲು ಪಾಲು ಪ್ರವಾಹಕ್ಕೆ ಒಳಗಾದಾಗ ಅದನ್ನು ನಿಭಾಯಿಸುವುದು ಸರ್ಕಾರಕ್ಕೆ ಸುಲಭದ ಮಾತಲ್ಲ. ಜನರ ಸಂಕಷ್ಟಕ್ಕೆ ಕ್ಷಣ, ಕ್ಷಣ ಸ್ಪಂದಿಸುತ್ತ, ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಜೊತೆಗೆ ಅಣೆಕಟ್ಟುಗಳ ಹೊರ ಹರಿವಿನ ಬಗ್ಗೆ ನೆರೆ ರಾಜ್ಯಗಳೊಂದಿಗೆ ಮಾತುಕತೆ ನಡೆಸಬೇಕು. ಇಷ್ಟೆಲ್ಲಾ ಕಾರ್ಯ ಸರ್ಕಾರದಲ್ಲಿ ಈಗ ಏಕಾಧಿಪತ್ಯ ಹೊಂದಿರುವ ಯಡಿಯೂರಪ್ಪ ಅವರ ಮೇಲಿದ್ದು, ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳೊಳಗೆ ಆದ ಪ್ರವಾಹದಿಂದ ಸಂಪುಟ ವಿಸ್ತರಣೆ ಕೂಡ ನೆನೆಗುದಿಗೆ ಬಿದ್ದಿದೆ. ಈ ಹಿನ್ನೆಲೆ ಸಿಎಂ ಯಡಿಯೂರಪ್ಪ ಒಬ್ಬರೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಈಗ ಮಾಜಿ ಪ್ರಧಾನಿಗಳಾದ ದೇವೇಗೌಡ ಬೆಂಬಲದ ಸಹಕಾರ ಮಾತುಗಳನ್ನು ಆಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ನೀವೊಬ್ಬರೆ ಓಡಾಡುತ್ತಿದ್ದೀರಾ ಎಂಬುದನ್ನು ನಾನು ಗಮನಿಸಿದ್ದೇನೆ. ನಿಮಗೆ ಅಧಿಕಾರಿಗಳು ಸಹಕರಿಸುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ನೆರವಿಗಾಗಿ ನಾನು ಪತ್ರ ಬರೆದಿದ್ದೇನೆ. ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಮನವಿ ಮಾಡಿದ್ದೇನೆ. ಹಾಗೇ ತುರ್ತು ಪರಿಹಾರವಾಗಿ 5000 ಕೋಟಿ ಬಿಡುಗಡೆಗೆ ಕೋರಿದ್ದೇನೆ. ಸಂತ್ರಸ್ತರ ಬದುಕು ರೂಪಿಸಲು ನಿಮ್ಮ ಜೊತೆ ನಾವಿದ್ದೇವೆ. ಇದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಸಂತ್ರಸ್ತರಿಗೆ ನೆರವು ಒದಗಿಸುವ ಸಂದರ್ಭದಲ್ಲಿ ಕೆಲವು ಲೋಪದೋಷಗಳು ಆಗುವುದು ಸಹಜ. ಆದರೆ ಇದರಲ್ಲಿ ಯಾವುದೇ ರಾಜಕೀಯ ಮಾಡದೇ ಎಲ್ಲರೂ ನೆರವಿಗೆ ಧಾವಿಸಬೇಕು. ಇದಕ್ಕೆ ನಮ್ಮ ಪಕ್ಷದ ಬೆಂಬಲವಿದೆ. ಸಂತ್ರಸ್ತರ ನೆರವಿಗೆ ಸರ್ಕಾರ ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. (ಕೆ.ಎಸ್,ಎಸ್.ಎಚ್)