ಪ್ರಮುಖ ಸುದ್ದಿ

ಪರಿಹಾರ ಕೇಂದ್ರಗಳಲ್ಲಿನ ನಿರಾಶ್ರಿತರಿಗೆ ನೆರವಿನ ಕಿಟ್ : ಅಗತ್ಯ ನೆರವಿನ ಭರವಸೆ

ರಾಜ್ಯ(ಮಡಿಕೇರಿ) ಆ.14 – ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ಥರಿಗೆ ರೆಡ್ ಕ್ರಾಸ್ ಜಿಲ್ಲಾ ಘಟಕದ ವತಿಯಿಂದ ನೆರವು ನೀಡಲಾಯಿತು.

ಕೊಡಗು ಜಿಲ್ಲೆಯ ವಿವಿಧ ಪರಿಹಾರ ಕೇಂದ್ರಗಳಲ್ಲಿರುವ ಮತ್ತು ನೆರೆಯಿಂದ ಸಂತ್ರಸ್ಥರಾದ 120 ಕ್ಕೂ ಅಧಿಕ ಕುಟುಂಬಗಳ ಸುಮಾರು 430 ಮಂದಿಗೆ ರೆಡ್ ಕ್ರಾಸ್ ವತಿಯಿಂದ ನೀಡಲಾಗುವ ಹೊದಿಕೆ, ಬಟ್ಟೆ, ಪಾತ್ರೆಗಳುಳ್ಳ ನೆರವಿನ ಕಿಟ್ ವಿತರಿಸಲಾಯಿತು.

ಅನೇಕ ಸಂತ್ರಸ್ತರು ಪ್ರವಾಹದಿಂದಾಗಿ ಮನೆ ಕಳೆದುಕೊಂಡದ್ದಲ್ಲದೇ ಮನೆಯೊಳಗಿದ್ದ ಚಿನ್ನಾಭರಣ, ಅಮೂಲ್ಯ ವಸ್ತುಗಳು, ದಾಖಲಾತಿಗಳನ್ನು ಕಳೆದುಕೊಂಡದ್ದಾಗಿ ನೋವು ತೋಡಿಕೊಂಡರು. ಹೊಸ ಜೀವನವನ್ನು ಎಲ್ಲಿಂದ, ಹೇಗೆ ಪ್ರಾರಂಭಿಸುವುದು ಎಂಬ ದಿಗಿಲು ವ್ಯಕ್ತಗೊಂಡಿತ್ತು.

ರೆಡ್ ಕ್ರಾಸ್ ತಂಡವು ಸಂತ್ರಸ್ಥರಿಗೆ ಸಾಂತ್ವನ ಹೇಳಿತಲ್ಲದೇ ಸರ್ಕಾರಗಳ ಮೂಲಕ ನಿರಾಶ್ರಿತರಿಗೆ ಎಲ್ಲಾ ನೆರವು ನೀಡಲು ಮುಂದಾಗುವುದರ ಜತೆಗೆ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೆಡ್ ಕ್ರಾಸ್ ಮೂಲಕ ಆರೋಗ್ಯ ಚಿಕಿತ್ಸೆ ಒಳಗೊಂಡಂತೆ ಎಲ್ಲಾ ರೀತಿಯ ನೆರವು ನೀಡುವುದಾಗಿಯೂ ಹೇಳಿತು.

ರೆಡ್ ಕ್ರಾಸ್ ಕೊಡಗು ಘಟಕದ ಜಿಲ್ಲಾಧ್ಯಕ್ಷೆಯಾಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾರ್ಗದರ್ಶನದಂತೆ ರೆಡ್ ಕ್ರಾಸ್ ಜಿಲ್ಲಾ ಸಭಾಧ್ಯಕ್ಷ ಬಿ.ಕೆ.ರವೀಂದ್ರ ರೈ. ಕಾರ್ಯದರ್ಶಿ ಎಚ್.ಆರ್.ಮುರಳೀಧರ್, ನಿರ್ದೇಶಕರಾದ ಕೆ.ಡಿ.ದಯಾನಂದ, ಪಿ.ಆರ್.ರಾಜೇಶ್, ಎಂ.ಧನಂಜಯ್ , ನವೀನ್ ಪೂಜಾರಿ, ಶಿಲ್ಪಾ ರೈ, ರೆಡ್ ಕ್ರಾಸ್ ಉಪಾಧ್ಯಕ್ಷರಾದ ಸ್ಯಾಮ್ ಜೋಸೆಫ್, ಅನಿಲ್ ಎಚ್.ಟಿ. ಪರಿಹಾರ ಕೇಂದ್ರಗಳಿಗೆ ತೆರಳಿ ರೆಡ್ ಕ್ರಾಸ್ ಕಿಟ್ ವಿತರಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: