ದೇಶಪ್ರಮುಖ ಸುದ್ದಿವಿದೇಶ

ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಮೋದಿ-ಟ್ರಂಪ್ ಹಲವು ಸುತ್ತಿನ ಭೇಟಿ ಸಾಧ್ಯತೆ

ನವದೆಹಲಿ: ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಚರ್ಚಿಸಲು ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಹಲವು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಮೋದಿ ಮೇ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಜುಲೈನಲ್ಲಿ ಹ್ಯಾಂಬರ್ಗ್‍ನಲ್ಲಿ ನಡೆಯಲಿರುವ ಜಿ-20 ರಾಷ್ಟ್ರಗಳ ಸಮ್ಮೇಳನದ ಪಾರ್ಶ್ವದಲ್ಲೂ ಉಭಯ ನಾಯಕರೂ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಮೋದಿ ಮತ್ತು ಟ್ರಂಪ್ ಈಗಾಗಲೇ ಹಲವು ಸುತ್ತಿನ ದೂರವಾಣಿ ಸಂಭಾಷಣೆ ನಡೆಸಿದ್ದು, ರಕ್ಷಣೆ, ಆರ್ಥಿಕ ಮತ್ತು ವ್ಯಾಪಾರ ವೃದ್ಧಿ ಸಂಬಂಧ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ಬಹುರಾಷ್ಟ್ರೀಯ ಕಾರ್ಯಕ್ರಮವಾಗಿರುವ ಹ್ಯಾಂಬರ್ಗ್‍ ಸಮ್ಮೇಳನಕ್ಕೂ ಮುಂಚೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಈ ನಾಯಕರು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಕ್ಷಣಾ ಕ್ಷೇತ್ರದ ಸಹಕಾರ ವೃದ್ಧಿ ವಿಷಯವಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಅಮೆರಿಕದ ರಾಜ್ಯ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಅವರು ಕಳೆದ ವಾರ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಚರ್ಚಿಸಿದ್ದಾರೆ.

ಇತ್ತೀಚೆಗೆ ರಾಜೀನಾಮೆ ನೀಡಿದ ಟ್ರಂಪ್ ಸರ್ಕಾರದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ಫ್ಲಿನ್ ಅವರೊಂದಿಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿ ಮಾಡಿ ಚರ್ಚಿಸಿದ್ದರು.
ಅಂತಾರಾಷ್ಟ್ರೀಯ ಬೆಳವಣಿಗೆಗಳ ಮೇಲೆ ಪ್ರಭಾವ ಬೀರಲಿರುವ ಭಾರತ-ಅಮೆರಿಕ ಮೈತ್ರಿಯ ಕುರಿತು ವಿಶ್ವದ ಹಲವು ರಾಷ್ಟ್ರಗಳು ಕುತೂಹಲದಿಂದ ಗಮನಿಸುತ್ತಿವೆ. ಅದರಲ್ಲೂ ಎರಡೂ ದೇಶಗಳ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ವೃದ್ಧಿಸುತ್ತಿದ್ದು ರಕ್ಷಣಾ ತಂತ್ರಜ್ಞಾನ ವಿನಿಮಯದ ಕುರಿತೂ ಮಾತುಕತೆ ನಡೆಸುತ್ತಿವೆ.

ಎಚ್‍-1-ಬಿ ವೀಸಾ ಕುರಿತು ಚರ್ಚೆ:

ಎಚ್‍-1—ಬಿ ವೀಸಾ ನೀತಿನಿಯಮಗಳಿಗೆ ಬದಲಾವಣೆ ತಂದಿರುವ ಟ್ರಂಪ್‍ ಸರ್ಕಾರದ ನಡೆಯ ಕುರಿತೂ ಭಾರತ ಅಮೆರಿಕ ಈಗಾಗಲೇ ಚರ್ಚಿಸಿವೆ. ಅಮೆರಿಕದಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಕಂಟಕಪ್ರಾಯವಾಗಿರುವ ಈ ನೀತಿಯ ಕುರಿತು ಅಮೆರಿಕದ ದೃಷ್ಟಿಕೋನ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಭಾರತದ ಅಧಿಕಾರಿಗಳು ಶ್ರಮಿಸುತ್ತಿದ್ದು, ಭಾರತದ ಉದ್ಯೋಗಿಗಳಿಗೆ ವಿನಾಯಿತಿ ಪಡೆಯುವ ನಿಟ್ಟಿನಲ್ಲಿ ದ್ವಿಪಕ್ಷೀಯ ಚರ್ಚೆ ವೇಳೆ ಈ ವಿಷಯ ಮತ್ತೆ ಪ್ರಸ್ತಾಪವಾಗುವ ಸಾಧ್ಯತೆ ಇದೆ.

Leave a Reply

comments

Related Articles

error: