ದೇಶ

ದರೋಡೆಕೋರರನ್ನು ಹೊಡೆದೋಡಿಸಿದ್ದ ವೃದ್ಧ ದಂಪತಿಗೆ ಶೌರ್ಯ ಪ್ರಶಸ್ತಿ

ಚೆನ್ನೈ,ಆ.16-ಇಬ್ಬರು ದರೋಡೆಕೋರರನ್ನು ಪ್ಲಾಸ್ಟಿಕ್ ಕುರ್ಚಿ, ಚಪ್ಪಲಿ ಎಸೆದು ಹೊಡೆದೋಡಿಸಿದ್ದ ವೃದ್ಧ ದಂಪತಿಗೆ ವಿಶೇಷ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಧೈರ್ಯದಿಂದ ದರೋಡೆಕೋರರನ್ನು ಓಡಿಸಿದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಿ.ಷಣ್ಮುಗವೇಲು ಮತ್ತು ಅವರ ಪತ್ನಿ ಸೆಂಥಾಮರೈಗೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಎರಡು ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಪದಕದೊಂದಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಷಣ್ಮುಗವೇಲು ಅವರು ಮನೆಯ ಹೊರಗೆ ಕುರ್ಚಿಯಲ್ಲಿ ಕುಳಿತಿದ್ದಾಗ. ಹಿಂದಿನಿಂದ ಬಂದ ದರೋಡೆಕೋರನೊಬ್ಬ ಅವರ ಕುತ್ತಿಗೆಗೆ ಶಾಲು ಸುತ್ತಿ ಕೊಲ್ಲಲು ಯತ್ನಿಸಿದ್ದ. ಈ ವೇಳೆ ಷಣ್ಮುಗವೇಲು ಕುರ್ಚಿಯಿಂದ ಕೆಳಗೆ ಬಿದ್ದರೂ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಏತನ್ಮಧ್ಯೆ ಮತ್ತೊಬ್ಬ ದರೋಡೆಕೋರ ಸಾಥ್ ನೀಡಿದ್ದ. ಅಷ್ಟರಲ್ಲಿ ಮನೆಯೊಳಗಿಂದ ಬಂದ ಪತ್ನಿ ಸೆಂಥಾಮರೈ ಕೂಡಲೇ ಇಬ್ಬರು ದರೋಡೆಕೋರರ ಮೇಲೆ ಕುರ್ಚಿ, ಚಪ್ಪಲಿ ಎಸೆದಿದ್ದರು. ಷಣ್ಮುಗವೇಲು ಕೂಡಾ ತಪ್ಪಿಸಿಕೊಂಡು ಪ್ಲಾಸ್ಟಿಕ್ ಕುರ್ಚಿಯಿಂದ ದರೋಡೆಕೋರರನ್ನು ಥಳಿಸಿದ್ದರು. ಕೊನೆಗೂ ಇಬ್ಬರು ಪರಾರಿಯಾಗಿದ್ದರು.

ಈ ಎಲ್ಲಾ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡಿತ್ತು. (ಎಂ.ಎನ್)

Leave a Reply

comments

Related Articles

error: