ಪ್ರಮುಖ ಸುದ್ದಿಮೈಸೂರು

ಆ.18ರಂದು ಹಿರಿಯ ರಂಗಕರ್ಮಿ ದಿ.ಏಣಗಿ ಬಾಳಪ್ಪನವರ ಪುಣ್ಯಸ್ಮರಣೆ : ಕೃತಿ ಬಿಡುಗಡೆ

ಮೈಸೂರು,ಆ.16 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ ಮತ್ತು ಸಂವಹನ , ಪ್ರಕಾಶಕರು ಸಹಯೋಗದೊಂದಿಗೆ ‘ರಂಗಕರ್ಮಿ ಏಣಗಿ ಬಾಳಪ್ಪ’ ಅವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಏಳನೆಯ ಮುದ್ರಣದ ಕೃತಿಯೊಂದಿಗೆ ಇಂಗ್ಲಿಷ್, ಮರಾಠಿ, ಅನುವಾದಿತ ಕೃತಿಗಳ ಬಿಡುಗಡೆ ಸಮಾರಂಭ ಹಾಗೂ ರಂಗಗೀತೆ ಸಂಭ್ರಮವನ್ನು ಏರ್ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.

ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆ.18ರ ಸಂಜೆ 6 ಗಂಟೆಗೆ  ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಸರೋದ ವಾದಕ ಪಂ.ರಾಜೀವ ತಾರಾನಾಥ ಉದ್ಘಾಟಿಸುವರು, ವಚನ ಚಿಂತಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ರಂಗಕರ್ಮಿಗಳಾದ ಶ್ರೀನಿವಾಸ ಕಪ್ಪಣ್ಣ, ಡಾ.ನಾ.ದಾಮೋದರ ಶೆಟ್ಟಿ, ಪತ್ರಕರ್ತ ಜಿ.ಗಣಪತಿ ಹಾಜರಿರಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತ ಗಣೇಶ ಅಮೀನಗಡ ಅವರು ಏಣಗಿ ಬಾಳಪ್ಪ ಅವರ ರಂಗಾನುಭವ ಕುರಿತು ಮಾತನಾಡುವರು, ಬಣ್ಣದ ಬದುಕಿನ ಚಿನ್ನದ ದಿನಗಳು ಕೃತಿಯ ಏಳನೆಯ ಮುದ್ರಣ ಇಂಗ್ಲಿಷ್ ಗೆ ಪ್ರೊ.ಕೃಷ್ಣಮೂರ್ತಿ ಅನುವಾದಿತ ‘ಗೋಲ್ಡನ್ ಡೇಸ್ ಆಫ್ ಕಲರ್ ಫುಲ್ ಲೈಪ್ ಹಾಗೂ ಮರಾಠಿಗೆ ಪ್ರೊ.ಗೋಪಾಲ ಮಹಾಮುನಿ ಅನುವಾದಿತ ‘ರಂಗಮಯ ಜೀವನಾಚೆ ಸುವರ್ಣಮಯ ದಿವಸ್’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಗುವುದು, ಈ ಸಂದರ್ಭದಲ್ಲಿ ಏಣಗಿ ಬಾಳಪ್ಪನವರ ಪುತ್ರರಾದ ಡಾ.ಬಸವರಾಜ ಏಣಗಿ, ಸುಭಾಷ ಏಣಗಿ ಹಾಜರಿರಲಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು, ಪತ್ರಕರ್ತ ಗಣೇಶ್ ಅಮೀನಗಡ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: