ಮೈಸೂರು

ನಮ್ಮಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ, ಮಾರ್ಚ್ 15ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು : ಕುಮಾರಸ್ವಾಮಿ ಸ್ಪಷ್ಟನೆ

ನಂಜನಗೂಡು,ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ನಮ್ಮಲ್ಲಿ ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ. ಮಾರ್ಚ್ 15ರಂದು  ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು.  124 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ಜೆಡಿಎಸ್ ರಾಜ್ಯಾದ್ಯಾಕ್ಷ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಮಾತನಾಡಿ ಶುಕ್ರವಾರ ನಂಜನಗೂಡು, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಅಲ್ಲಿನ ಜೆಡಿಎಸ್‌ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದುಕೊಂಡಿದ್ದೇನೆ. ಈ ಎರಡು ಕಡೆ ಜೆಡಿಎಸ್ ಅಭ್ಯರ್ಥಿ ಹಾಕುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಆದರೆ ನಮ್ಮಲ್ಲಿ ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ ಎಂದರು. ಶುಕ್ರವಾರ  ನಂಜನಗೂಡಿನಲ್ಲಿ ನನ್ನನ್ನು ಬರಮಾಡಿಕೊಳ್ಳಲು ನಿಂತಿದ್ದ ಯುವಕರನ್ನು ಪೊಲೀಸರು ತಡೆದಿದ್ದಾರೆ‌. ಕಾಂಗ್ರೆಸ್ ಹೇಗೆ ಚುನಾವಣೆ ನಡೆಸಲಿದೆ ಎಂದು ಇದರಲ್ಲೇ ತಿಳಿಯಲಿದೆ ಎಂದರು. ಎರಡೂ‌ ಕಡೆ ಜೆಡಿಎಸ್‌ಗೆ ಜನರ ಬೆಂಬಲ ಇದೆ. ಗುಂಡ್ಲುಪೇಟೆಯಲ್ಲಿ ಮೊದಲಿನ ಪರಿಸ್ಥಿತಿ ಈಗಿಲ್ಲ. ಪರಿಸ್ಥಿತಿ ಬದಲಾಗಿದೆ. ಈಗಾಗಲೇ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಎರಡು ಕಡೆ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಕಾರ್ಯಕರ್ತರ ಅಭಿಪ್ರಾಯವೇ ಅಂತಿಮವಾಗಿದ್ದು,  ಅವರ ಅಭಿಪ್ರಾಯದಂತೆ ಎರಡು ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಳಲೆ ಕೇಶವಮೂರ್ತಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಕಳೆದ ಎರಡು ಬಾರಿ ಜೆಡಿಎಸ್ ಅಭ್ಯರ್ಥಿ ಆಗಿದ್ದರು. ಇದೀಗ ನಾನು ಮತ್ತು  ದೇವೇಗೌಡರು ಕಾಂಗ್ರೆಸ್ ಸೇರಿ ಎಂದು ಹೇಳಿದ್ದೇವೆ ಎನ್ನುತ್ತಿದ್ದಾರೆ.ನಾನಾಗಲಿ, ಪಕ್ಷದ‌ ನಾಯಕರಾಗಲಿ ಯಾರೂ ಹಾಗೆ ಹೇಳಿಲ್ಲ. ನಮ್ಮ‌ ಬಳಿ ಯಾರೂ ಕೂಡ ಈ ಕುರಿತು ಚರ್ಚಿಸಿಲ್ಲ. ಕೇಶವಮೂರ್ತಿ ಬಿಟ್ಟು ಹೋದರೆ ಜೆಡಿಎಸ್ ಗೇನೂ  ನಷ್ಟವಿಲ್ಲ ಎಂದರು. ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಸರಿಸಾಟಿ ಅಲ್ಲಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಮ್ಮ ಪಕ್ಷದವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋಗಿ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಈ ಮೂಲಕ ನಮ್ಮ ಪಕ್ಷ ಕಾಂಗ್ರೆಸ್ ಗೆ ಸರಿಸಾಟಿ ಅಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಆಪರೇಷನ್ ಚುನಾವಣೆ ವೇಳೆ 20 ಚುನಾವಣೆ ಯನ್ನು ಎದುರಿಸಿದ್ದೇನೆ.ನನ್ನಲ್ಲಿ ಯಾವುದೇ ಗೊಂದಲವೂ ಇಲ್ಲ. ಭಯವೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳ ದರಿದ್ರವಿದೆ. ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೇ ಇಲ್ಲವಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿಯವರು  ಹೊಸಮುಖಗಳಿಗೆ ಅವಕಾಶ ಕೊಡುತ್ತೇವೆ. ಮುಖಂಡರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಇದು ರಾಜಕೀಯ ದ್ರುವೀಕರಣವಲ್ಲ. 150ಸ್ಥಾನ ಗೆದ್ದಿದ್ದೇವೆ ಅಂತ ಹೇಳುತ್ತಾರೆ.  ಕಾಂಗ್ರೆಸ್ ನವರು ನಾವು ಕೂಡ ಮತ್ತೆ ಅಧಿಕಾರದಲ್ಲಿರುತ್ತೇವೆ ಎನ್ನುತ್ತಾರೆ ಎರಡು ರಾಷ್ಟ್ರೀಯ ಪಕ್ಷಗಳ ಹೇಳಿಕೆಗಳಿಗೇನೂ ಕೊರತೆಯಾಗಿಲ್ಲ. ಈ ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವವರು ವೀರಪ್ಪನ್ ಗಿಂತಲೂ ಕೆಟ್ಟ ಜನರು ಎಂದು ಲೇವಡಿಯಾಡಿದರು.

ಗೋವಿಂದ ರಾಜು ಡೈರಿ ಕುರಿತು ಮಾತನಾಡಿದ ಅವರು ಡೈರಿ ಸೀಜ್ ಆಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಡೈರಿಯಲ್ಲಿ ಬರೆದಿರುವ ಮಾಹಿತಿಗಳು ಸತ್ಯ ಅಂತ ಒಪ್ಪಿಕೊಂಡಿದ್ದಾರೆ. ಹಣದ ಮಾಹಿತಿ ಬಗ್ಗೆ ತಿಳಿಸಿದ್ದಾರೆ. ಡೈರಿ ಮಾಹಿತಿ ಇಟ್ಟುಕೊಂಡು ಆರೋಪಿಯನ್ನಾಗಿಸುವುದು ಅಸಾಧ್ಯ ಅಂತಲೂ ಹೇಳಿದ್ದಾರೆ.ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಡಿ ಕೂಡ ಬಿಡುಗಡೆಯಾಗಿದೆ. ಸಿದ್ದರಾಮಯ್ಯ ಅಕ್ರಮ‌ಮಾಡಿದ್ದರೆ ಸಾಕ್ಷ್ಯ ಕೊಡಿ ಎಂದಿದ್ದರು. ಡೈರಿ ಇದೆಯಲ್ಲ , ಅಷ್ಟು ಸಾಕಲ್ಲವೇ, ಮತ್ತೇನು ಬೇಕು. ನೈತಿಕತೆಯಿದ್ದರೆ  ಮಾತ್ರ ಸತ್ಯದ ಬಗ್ಗೆ ಮಾತನಾಡಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Leave a Reply

comments

Related Articles

error: