ಮೈಸೂರು

ಇಲಾಖೆ ಅಧಿಕಾರಿಗಳು ಅಂಗವಿಕಲರಿಗೆ ಸೌಲಭ್ಯ ನೀಡಲು ನಿರಾಕರಿಸಿದರೆ ಅಥವಾ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ : ವಿ.ಎಸ್. ಬಸವರಾಜು ಎಚ್ಚರಿಕೆ

ಮೈಸೂರು,ಆ.17:-  ಇಲಾಖೆ ಅಧಿಕಾರಿಗಳು ಅಂಗವಿಕಲರಿಗೆ ಸೌಲಭ್ಯ ನೀಡಲು ನಿರಾಕರಿಸಿದರೆ ಅಥವಾ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಜರುಗಿ ಸಲಾಗುವುದು ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಇಲಾಖಾವಾರು ಅಂಗವಿಕಲರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.  ಅಧಿಕಾರಿಗಳು ಸೌಲಭ್ಯ ನೀಡಲು ನಿರಾಕರಿಸಿದರೆ, ನಿರ್ಲಕ್ಷ್ಯ ತೋರಿದರೆ ಅವರ  ವಿರುದ್ಧ ಆಯೋಗಕ್ಕೆ ದೂರು ನೀಡಿದಲ್ಲಿ  5 ಲಕ್ಷ ರೂ. ದಂಡ, 2 ವರ್ಷ ಜೈಲು ಶಿಕ್ಷೆ ಹಾಗೂ ಕೆಲವೊಮ್ಮೆ ಈ ಎರಡೂ ಶಿಕ್ಷೆಯನ್ನು ಒಟ್ಟಿಗೆ ವಿಧಿಸಲು ಅವಕಾಶವಿದೆ. ಅಂಗವಿಕಲರು ತಮಗೆ ಅನ್ಯಾಯವಾಗಿದ್ದರೆ ದೂರು ನೀಡಿ ಎಂದು ಸ್ಥಳದಲ್ಲಿ ಹಾಜರಿದ್ದ ಅಂಗವಿಕಲರಿಗೆ ಸಲಹೆ ನೀಡಿದರು.

ಬಹುತೇಕ ಇಲಾಖೆಗಳು  ಅಂಗವಿಕಲರಿಗೆ ಮೀಸಲಾಗಿರುವ ಶೇ.5ರಷ್ಟು ನಿಧಿಯನ್ನು ಬಳಕೆ ಮಾಡಲು ವಿಫಲವಾಗಿರುವುದಕ್ಕೆ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ,  ಆರು ತಿಂಗಳು ಕಳೆದ ನಂತರ ಮತ್ತೊಮ್ಮೆ ಸಭೆ ನಡೆಸುತ್ತೇನೆ. ಆ ಸಭೆಯೊಳಗೆ ಎಲ್ಲ ಇಲಾಖೆ ಅಧಿಕಾರಿಗಳು ಪ್ರಗತಿ ಸಾಧಿಸಬೇಕು. ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಬೇಕೆಂದು ನಿರ್ದೇಶಿಸಿದರು.

ಅಂಗವಿಕಲರಿಗೆ ವಿವಿಧ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಇಲ್ಲ.  ಅದಕ್ಕಾಗಿ ಅಂಗವಿಕಲರ ಮನೆ ಬಾಗಿಲಿಗೆ ಮಾಹಿತಿ ತಲುಪುವಂತೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಕಚೇರಿಗೆ ಬರುವ ಅಂಗವಿಕಲರಿಗೆ ಮಾತ್ರ ಸೌಲಭ್ಯ ನೀಡುತ್ತೇವೆ ಎಂಬ ಮನೋಭಾವನೆ ಬದಲಾಯಿಸಿಕೊಳ್ಳಬೇಕು. ಮೊದಲು ನೀವು ಅಂಗವಿಕಲರ ಬಳಿ ತೆರಳಿ ಅವರಲ್ಲಿ ಜಾಗೃತಿ ಮೂಡಿಸಿ ನಂತರ ಅವರು ತಾವಾಗಿಯೇ ಕಚೇರಿಗೆ ಬಂದು ತಮ್ಮ ಸೌಲಭ್ಯಗಳನ್ನು ಪಡೆಯುತ್ತಾರೆ. ಪ್ರತಿಯೊಂದು ಇಲಾಖೆ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿ ಎಂದು ಸೂಚನೆ ನೀಡಿದರು.

ಅಂಗವಿಕಲರಿಗೆ ಸೇರಿದ 8 ಕೋಟಿ ರೂ. ಅನುದಾನ ನಗರ ಪಾಲಿಕೆಯೊಂದರಲ್ಲಿಯೇ ಇದ್ದು, ಈ ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕೆ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು. ಇದೇ ರೀತಿ ಪ್ರತಿ ಇಲಾಖೆಯಲ್ಲಿ ಲಕ್ಷಾಂತರ ರೂ. ಅನುದಾನವಿದೆ. ಆದರೆ, ಯಾವುದೇ ಇಲಾಖೆ, ಸ್ಥಳೀಯ ಸಂಸ್ಥೆಗಳು ಅನುದಾನ ಬಳಕೆ ಮಾಡಲು ಹೆಚ್ಚಿನ ಆಸಕ್ತಿ ತೋರದೆ ಇರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಸಹಾಯಕ ಆಯುಕ್ತ ಎಸ್.ಕೆ. ಪದ್ಮನಾಭ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: