ಮೈಸೂರು

ಹಳೆಯ-ಹೊಸ ವಿದ್ಯಾರ್ಥಿಗಳ ಸಮ್ಮಿಲನ : ಸುಂದರ ಕ್ಷಣಗಳನ್ನು ಮೆಲುಕು ಹಾಕಿದ ಹಳೆ ವಿದ್ಯಾರ್ಥಿಗಳು

‘ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಬಗು’ ಈ ಮಾತು ಅಕ್ಷರಶಃ ಸತ್ಯವಾಗಿದ್ದು ಮಹಾರಾಣಿ ಮಹಿಳಾ ಕಾಲೇಜಿನಲ್ಲಿ.  ಕಾಲೇಜಿನ ಅಂಗಳದಲ್ಲಿ  ಹಳೆಯ ಹಾಗೂ  ಹೊಸ ವಿದ್ಯಾರ್ಥಿಗಳ ಸಮ್ಮಿಲನದಿಂದ ಕಾಲೇಜೆಂಬ ಬೃಹತ್ ವೃಕ್ಷ ನಳನಳಿಸುತ್ತಿತ್ತು. ತಮ್ಮ ಕಾಲೇಜು ದಿನಗಳನ್ನು ನೆನೆಯುತ್ತಾ, ಅಂದಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದ ಸುಂದರ ಕ್ಷಣಗಳು ಎಲ್ಲರ ಮೊಗದಲ್ಲೂ ಹರ್ಷ ತರಿಸಿತ್ತು. 70-80 ವರ್ಷ ವಯಸ್ಸಾಗಿದ್ದರೂ ಕಾಲೇಜು ನೆಲವನ್ನು ಸ್ಪರ್ಶಿಸಿದ ತಕ್ಷಣ ತಾವಿನ್ನೂ 18-20 ವರ್ಷದ ಯುವತಿಯರು ಎಂಬ ಭಾವನೆ ಹೊತ್ತಿದ್ದ ಮುಖಗಳು ಕಾಣುತ್ತಿದ್ದವು.

ಮಹಾರಾಣಿ ವಿಜ್ಞಾನ ಕಾಲೇಜಿನ ಕಲಾ ಮಂಟಪದಲ್ಲಿ ಶತಮಾನೋತ್ಸವ ಸಂಭ್ರಮ ಹಾಗೂ ಹಿರಿಯ ವಿದ್ಯಾರ್ಥಿನಿಯರ ಸಂ‍ಘದ ಉದ್ಘಾಟನಾ ಸಮಾಂಭವನ್ನು ಶನಿವಾರ ಹಮ್ಮಿಕೊ‍ಳ್ಳಲಾಗಿತ್ತು.

ಚಾಮರಾಜ ಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸು ಅವರ ಪುತ್ರ ಕವೀಶ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ ಯಾವುದೇ ಒಂದು ಕಾಲೇಜು ಸಂಸ್ಥೆಯ ಯಶಸ್ಸು ಆ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡುವ ವಿದ್ಯಾರ್ಥಿಗಳಲ್ಲಿ ಅಡಗಿರುತ್ತದೆ. ಮಹಾರಾಣಿ ಕಾಲೇಜು ಅಂತಹ ಲಕ್ಷಾಂತರ ಮಹನೀಯರನ್ನು ಈ ಸಮಾಜಕ್ಕೆ ನೀಡಿದೆ. 100 ವರ್ಷಗಳ ಇತಿಹಾಸವಿರುವ ಈ ಮಹಾನ್ ಸಂಸ್ಥೆಯಲ್ಲಿ ಓದುತ್ತಿರುವ ನೀವೇ ಧನ್ಯರು ಎಂದರು.

ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಗಳು ಇರುವುದಿಲ್ಲ ಎಂಬ ಕೆಟ್ಟ ಭಾವನೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರಲ್ಲಿ ಇದೆ. ಆದರೆ ಶಿಕ್ಷಣದ ಮೌಲ್ಯ ಹೆಚ್ಚಾಗಿ ತಿಳಿದಿರುವುದು ಗ್ರಾಮೀಣ ಪ್ರದೇಶದಿಂದ ಬಂದು ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮಾತ್ರ ಎಂದು ತಿಳಿಸಿದರು.

ಇಂದು ಎಲ್ಲಾ ಸರ್ಕಾರಿ ಕಾಲೇಜುಗಳು ಬ್ರ್ಯಾಂಡ್ ಮಾಡುವ ಪರಿಸ್ಥಿತಿ ಬಂದಿದೆ. ಇದು ಕೆಟ್ಟ ಬೆಳವಣಿಗೆಯೇನೂ ಅಲ್ಲ. ನೀವು ಓದಿದ ಕಾಲೇಜುಗಳನ್ನು ಬ್ರ್ಯಾಂಡ್ ಮಾಡಿದರೆ, ನಿಮ್ಮ ಉದ್ಯೋಗಾವಕಾಶ ಮತ್ತು ಜೀವನ ವೃತ್ತಿಗೂ ಸಹಾಯವಾಗುತ್ತದೆ. ಅಂತೆಯೇ ಶಿಕ್ಷಣ ಸಂಸ್ಥೆಗೂ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.

ಮುಖ‍್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಹಳೆಯ ವಿದ್ಯಾರ್ಥಿನಿ, ಭರತನಾಟ್ಯ ಕಲಾವಿದೆ ಹಾಗೂ ರಾಸವೃಂದ ನೃತ್ಯಶಾಲೆಯ ಸಂಸ್ಥಾಪಕಿ ನಂದಿನಿ ಈಶ್ವರ್ ತಮ್ಮ ಕಾಲೇಜು ದಿನಗಳನ್ನು ನೆನೆದರು. ತಾವು ಕುಳಿತಿದ್ದ ಕೊಠಡಿಗಳು ಮತ್ತು ಕೇಳಿದ್ದ ಪಾಠಗಳನ್ನು ನೆನೆದು ಭಾವುಕರಾದರು. ಅಂದು ನಮ್ಮ ಗುರುಗಳು ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಶಾಸ್ತ್ರೀಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದಲೇ ನಾನು ಇಂದು ಈ ಸ್ಥಾನದಲ್ಲಿರಲು ಸಾಧ್ಯವಾಗಿರುವುದು. ಅಂದಿನ ಕಾಲೇಜು ದಿನಗಳ ನೆನಪುಗಳು ಎಂದಿಗೂ ಶಾಶ್ವತ ಎಂದು ಸ್ಮರಿಸಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿನಿ ಮತ್ತು ನಿವೃತ್ತ ವಿಜ್ಞಾನಿ ಎನ್.ಜಮುನಾ ಅರಸ್ ಮಾತನಾಡಿ, “ಹಳೆಯದನ್ನು ಅಳಿಸಲು ಸಾಧ್ಯವಿಲ್ಲ. ಹೊಸದನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ನಮ್ಮ ಕಾಲೇಜು ದಿನಗಳು, ಕೀಟಲೆಗಳು, ಸ್ನೇಹಿತರೊಂದಿಗೆ ಕಳೆದ ಮಧುರ ಕ್ಷಣಗಳು, ಅಧ್ಯಾಪಕರೊಂದಿಗಿನ ಒಡನಾಟ ಎಲ್ಲವೂ ನೆನಪಿನ ಬುತ್ತಿ ಎಂದು ತಮ್ಮ ಕಾಲೇಜು ದಿನಗಳನ್ನು ನೆನೆದು ಸಂತಸಪಟ್ಟರು.

ಇಂದು ಪ್ರತಿಯೊಬ್ಬರೂ  ದೇಶ ಕಾಯುವ ಯೋಧ ಮತ್ತು ಅನ್ನ ನೀಡುವ ರೈತನಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಬೇಕು. ಅನ್ನ ತಿನ್ನುವ ಹಕ್ಕು ಎಲ್ಲರಿಗೂ ಇದೆ. ಆದರೆ ಬಿಸಾಡುವ ಹಕ್ಕು ಯಾರಿಗೂ ಇಲ್ಲ. ಒಂದೊಂದು ಅಕ್ಕಿ ಕಾಳಿನ ಹಿಂದೆ ಒಬ್ಬೊಬ್ಬ ರೈತನ ಪರಿಶ್ರಮವಿದೆ ಎಂದರು.

1954 ನೇ ಸಾಲಿನಿಂದ ಇಲ್ಲಿಯವರೆಗೂ ವಿದ್ಯಾಭ‍್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಶುಂಪಾಲೆ ಪ್ರೊ.ಬಿ.ಟಿ.ವಿಜಯ್, ಪ್ರೊ.ಎಂ.ಎಲ್.ವಿಜಯಕುಮಾರಿ, ಪ್ರೊ.ಶೀಲಾ ಉಪಸ್ಥಿತರಿದ್ದರು.

Leave a Reply

comments

Related Articles

error: