ಪ್ರಮುಖ ಸುದ್ದಿ

ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸಮಾಲೋಚನಾ ಸಭೆ : 5 ಟ್ರಿಲಿಯನ್ ಗುರಿ ಮುಟ್ಟಲು ಕಾರ್ಯಕ್ರಮ ರೂಪಿಸಲು ಚಿಂತನೆ

ರಾಜ್ಯ(ಮಡಿಕೇರಿ) ಆ.20 :- ಬ್ಯಾಂಕುಗಳ ಕಾರ್ಯಕ್ಷಮತೆ, ಹೊಸ ಕಲ್ಪನೆಗಳು ಹಾಗೂ ಬ್ಯಾಂಕುಗಳು ರಾಷ್ಟ್ರೀಯ ಆದ್ಯತೆಗಳ ಜೊತೆಯಲ್ಲೇ ಕಾರ್ಯ ನಿರ್ವಹಣೆ ಬಗ್ಗೆ ಕೆನರಾ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯಲ್ಲಿ ಮಂಗಳೂರು ವೃತ್ತ ಕಚೇರಿಯ ಡಿಜಿಎಂ ಬಾಲ ಮುಕುಂದ ಶರ್ಮ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಡಿಕೇರಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಎಜಿಎಂ ವಿ.ಜೆ.ಅರುಣಾ ಮತ್ತು ಕೊಡಗಿನ 24 ಶಾಖೆಗಳ ವ್ಯವಸ್ಥಾಪಕರ ಉಪಸ್ಥಿತಿಯಲ್ಲಿ ಮೊದಲನೇ ಹಂತದ ಸಮಾಲೋಚನಾ ಸಭೆ ನಡೆಯಿತು.
ಭಾರತದ ಆರ್ಥಿಕತೆ 2025 ರ ವೇಳೆಗೆ 5 ಟ್ರಿಲಿಯನ್ ಗುರಿ ಮುಟ್ಟಲು ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಕೊಡುಗೆ ಅಪಾರವಾಗಿದ್ದು, ಈ ಸಂಬಂಧ ಬ್ಯಾಂಕ್‍ನ ತಳಮಟ್ಟದಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಆರ್ಥಿಕ ಗುರಿಮುಟ್ಟುವ ಉದ್ದೇಶದಿಂದ ಸಮಾಲೋಚನಾ ಸಭೆಯಲ್ಲಿ ಖುದ್ದು ಬ್ಯಾಂಕಿನ ಶಾಖೆಗಳಿಗೆ ತಮ್ಮ ಕಾರ್ಯಕ್ಷಮತೆಯ ಬಗ್ಗೆ ವಿಮರ್ಶೆ ಮಾಡಲು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗಿರುವ ಸಮಸ್ಯೆಗಳ ಬಗ್ಗೆ ಉದ್ದೇಶಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಲು ಹಾಗೂ ಭವಿಷ್ಯಕ್ಕಾಗಿ ರೂಪುರೇಷೆಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳಲು ಅವಕಾಶ ನೀಡಲಾಯಿತು.
ಈ ಸಭೆಯು ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ಹೆಚ್ಚಿಸುವ ಮಾರ್ಗಗಳು ಮತ್ತು ವಿಧಾನಗಳು, ಹೊಸತನವನ್ನು ತರಲು ತಂತ್ರಜ್ಞಾನದ ಬಳಕೆ ಹೆಚ್ಚಿಸುವುದು, ದೊಡ್ಡ ದತ್ತಾಂಶ ವಿಶ್ಲೇಷಣೆ ಸಕ್ರೀಯಗೊಳಿಸುವುದು, ಬ್ಯಾಂಕಿಂಗ್‍ನ್ನು ನಾಗರಿಕ ಕೇಂದ್ರಿತವಾಗುವಂತೆ ಮಾಡುವುದು ಮತ್ತು ಹಿರಿಯ ನಾಗರಿಕರ, ರೈತರ, ಸಣ್ಣ ಕೈಗಾರಿಕೋದ್ಯಮಿಗಳ, ಉದ್ಯಮಿಗಳ, ಯುವಕರ, ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಅಗತ್ಯತೆಗಳಿಗೆ ಮತ್ತು ಆಕಾಂಕ್ಷೆಗಳಿಗೆ ಹೆಚ್ಚು ಸ್ಪಂದಿಸುವುದರ ಮೇಲೆ ಕೇಂದ್ರೀಕರಿಸಿತ್ತು.
ಬ್ಯಾಂಕಿಂಗ್ ಕ್ಷೇತ್ರವು ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತು ಡೊಮೇನ್ ತಜ್ಞರ ವಿಷಯಾಧಾರಿತ ಒಂಬತ್ತು ವಿಭಾಗಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ(ಪಿಎಸ್‍ಬಿ) ಸುಧಾರಣೆಗಳನ್ನು ಸೂಚಿಸುವ ಉದ್ದೇಶದಿಂದ ಮತ್ತು ಭವಿಷ್ಯದ ಮಾರ್ಗಸೂಚಿ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಮಾಲೋಚನೆಗಳ ಪರಿಣಾಮವಾಗಿ, ಸಾಮಾನ್ಯವಾಗಿ ಪಿಎಸ್‍ಬಿಗಳು ಮತ್ತು ನಿರ್ದಿಷ್ಟವಾಗಿ ಕೆನರಾ ಬ್ಯಾಂಕ್ ಹೇಗೆ ತನ್ನ ಕಾರ್ಯಕ್ಷಮತೆ ಸುಧಾರಿಸಬಹುದು ಮತ್ತು ಭವಿಷ್ಯದ ನೀಲನಕ್ಷೆ ಹೇಗಿರಬೇಕು ಎಂಬುದರ ಕುರಿತು ಹಲವಾರು ಕಾರ್ಯಗತಗೊಳಿಸಬಹುದಾದ ಮತ್ತು ನವೀನ ಸಲಹೆಗಳು ಬಂದವು.
ಈ ಸಲಹೆಗಳನ್ನು ಒಟ್ಟುಗೂಡಿಸಿ ಮತ್ತು ಪ್ರತಿ ಪ್ರದೇಶದ ಅಡಿಯಲ್ಲಿರುವ ಶಾಖೆಗಳ ತುಲನಾತ್ಮಕ ಕಾರ್ಯಕ್ಷಮತೆಯ ಮೌಲ್ಯಮಾಪನದೊಂದಿಗೆ ಎಸ್‍ಎಲ್‍ಬಿಸಿ, ರಾಜ್ಯ ಮಟ್ಟದಲ್ಲಿ ಹೆಚ್ಚಿನ ಚರ್ಚೆಗಾಗಿ ವಲಯ ಮಟ್ಟಕ್ಕೆ ಕಳುಹಿಸಲಾಗಿದೆ. ಎಸ್‍ಎಲ್‍ಬಿಸಿ ಹಂತದ ನಂತರ, ಇಂಟ್ರಾ ಮತ್ತು ಇಂಟರ್ ಬ್ಯಾಂಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ರಾಷ್ಟ್ರೀಯ ಮಟ್ಟದಲ್ಲಿ ಅಂತಿಮ ಸಮಾಲೋಚನೆ ನಡೆಸಲಾಗುವುದು ಮತ್ತು ಪಿಎಸ್‍ಬಿಗಳಾದ್ಯಂತ ಅನುಷ್ಠಾನಕ್ಕೆ ಮುಂದಿನ ಮಾರ್ಗದ ಕುರಿತು ಸಲಹೆಗಳನ್ನು ಅಂತಿಮಗೊಳಿಸಲಾಗುವುದು.
ಸಮಾಲೋಚನಾ ಪ್ರಕ್ರಿಯೆಯು ಶಾಖೆಯ ಮಟ್ಟಕ್ಕೆ ಹೊಸ ಒಳಗೊಳ್ಳುವಿಕೆ ಮತ್ತು ಉದ್ದೇಶ ಉಂಟುಮಾಡಿದೆ ಮತ್ತು ಭವಿಷ್ಯಕ್ಕಾಗಿ ಮಾರ್ಗಸೂಚಿ ಕಾರ್ಯಗತಗೊಳಿಸಲು, ಅದರ ಕಾರ್ಯಕ್ಷಮತೆ ಸುಧಾರಿಸಲು ಮತ್ತು ರಾಷ್ಟ್ರೀಯ ಆದ್ಯತೆಗಳಿಗೆ ಹೊಂದಿಕೊಳ್ಳಲು ಬ್ಯಾಂಕ್ ಸಜ್ಜಾಗಿದೆ. ಇದರಿಂದಾಗಿ ಭಾರತೀಯ ಬೆಳವಣಿಗೆಯ ಕಥೆಯಲ್ಲಿ ಅದು ತನ್ನ ಪಾಲುದಾರಿಕೆಯ ಆದೇಶ ಪೂರೈಸುತ್ತದೆ.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಎಜಿಎಂ ವಿ.ಜೆ.ಅರುಣಾ ಅವರು ಮಾತನಾಡಿ ಕೊಡಗಿನ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವಂತಹ ಎಂಎಸ್‍ಎಂಇ(ಮಧ್ಯಮ ಕೈಗಾರಿಕೆ) ಪ್ಯಾಕೇಜ್ ಸಿದ್ಧ್ದಪಡಿಸಿ ಕೊಡಗಿನ ಆರ್ಥಿಕ ಪ್ರಗತಿಗೆ ಮುನ್ನುಡಿ ಇಡಲು ಕ್ರಮಕೈಗೊಳ್ಳಲು ಆದ್ಯತೆ ನೀಡಲಾಗುವುದು. ಹಾಗೂ ಇಂಟರ್‍ನೆಟ್ ಬ್ಯಾಂಕಿಂಗ್‍ನಲ್ಲಿ ಜಿಲ್ಲೆಯಲ್ಲಿ ಆಗುತ್ತಿರುವ ಸಂಪರ್ಕ ಕೊರತೆಯನ್ನು ತಿಳಿಗೊಳಿಸಲಾಗುವುದು. ಜೊತೆಗೆ ರಾಷ್ಟ್ರೀಯ ಆದ್ಯತೆಗಳಾದ ವಿದ್ಯಾಭ್ಯಾಸ, ಗೃಹ ಸಾಲ, ಹೀಗೆ ಸಾಮಾಜಿಕ ನ್ಯಾಯ ಪ್ರತಿಯೊಬ್ಬರಿಗೂ ದೊರಕಿಸಿಕೊಡುವ ನಿಟ್ಟಿನಲ್ಲಿ ಬ್ಯಾಂಕ್ ಕಾರ್ಯೋನ್ಮುಖವಾಗಿರುವುದಾಗಿ ಅವರು ತಿಳಿಸಿದರು.
ಈಗಾಗಲೇ ಹೇಳಿದಂತೆ 2025 ಕ್ಕೆ ದೇಶ ಐದು ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆ ತಲುಪಬೇಕಾದ ಗುರಿ ಹೊಂದಿದ್ದು, ಈ ಪೈಕಿ 188 ಲಕ್ಷ ಕೋಟಿ ಹಣಕಾಸಿನ ವ್ಯವಸ್ಥೆಯನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳು ಗುರಿ ತಲುಪಬೇಕಿದೆ. ಪ್ರಸ್ತುತ 90 ಲಕ್ಷ ಕೋಟಿ ವ್ಯವಹಾರದಲ್ಲಿ ಬ್ಯಾಂಕ್‍ಗಳಿದ್ದು, ಇದನ್ನು ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಕೃಷಿಗೆ ರೂ.10 ಲಕ್ಷ ಕೋಟಿ ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ರೂ.30 ಲಕ್ಷ ಕೋಟಿ ಅಂದಾಜಿಸಲಾಗಿದೆ ಎಂದು ಅರುಣ ಹೇಳಿದರು.
ಹಾಗೆಯೇ ಶಾಖಾ ಮಟ್ಟದಲ್ಲಿ ಸಂಪರ್ಕ ವ್ಯವಸ್ಥೆಯ ಸುಧಾರಣೆ, ಸುಸಜ್ಜಿತ ಎಟಿಎಂಗಳ ಸ್ಥಾಪನೆ, ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಗ್ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅವಶ್ಯಕತೆ, ವಿವಿಧ ರೀತಿಯಲ್ಲಿ ಸಾಲ ನೀಡುವಿಕೆಯಲ್ಲಿ ವಿವಿಧ ಹಂತಗಳಲ್ಲಿ ಸರಳೀಕೃತ ವಿಧಾನಗಳನ್ನು ಬಯಸುವ ಬಗ್ಗೆಯೂ ವಿವಿಧ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿದ್ದು ಅವೆಲ್ಲವನ್ನು ಕ್ರೋಡೀಕರಿಸಿ ತಮ್ಮ ಮೇಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಎಂದು ಸಹಾಯಕ ಮಹಾ ಪ್ರಬಂಧಕ ವಿ.ಜೆ.ಅರುಣ ಹೇಳಿದರು.
ಸಭೆಯಲ್ಲಿ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳಾದ ಪ್ರಕಾಶ್, ಅರ್ಜುನ್, ಶ್ರೀಹರಿ, ವಿಕ್ಟರ್ ಕ್ರೂಸ್ ಸೇರಿದಂತೆ ಜಿಲ್ಲೆಯ 24 ಶಾಖಾ ಮುಖ್ಯಸ್ಥರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: