ಮೈಸೂರು

ಪೂರ್ವಜರು ನೀಡಿದ ಕೊಡುಗೆಗಳನ್ನು ಮರೆಯುತ್ತಿದ್ದೇವೆ : ಸಿದ್ದಲಿಂಗರಾಜೇ ಅರಸ್ ವಿಷಾದ

ಮೈಸೂರು ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಅರಸು ಜಯಂತೋತ್ಸವ ಸಮಿತಿ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ರಾಜಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಗೆ ಮೈಸೂರಿನ ಕಲಾಮಂದಿರದಲ್ಲಿ ಚಾಲನೆ ನೀಡಲಾಯಿತು.

ಕಲಾಮಂದಿರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದ ಕೆ.ಆರ್.ನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಚೈತ್ರ ಅರಸ್, ತಮ್ಮ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದವರು ಕೃಷ್ಣರಾಜ ಒಡೆಯರ್ ಅವರು. ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಲು ಮಿಲ್ಲರ್ ಆಯೋಗ ರಚಿಸಿದರು. ಸರ್ವಧರ್ಮದ ಸಮನ್ವಯತೆಗೆ ಒತ್ತು ನೀಡಿದರು. ದಿವಾನರಾದ ಮಿರ್ಜಾ ಇಸ್ಮಾಯಿಲ್ ತಮ್ಮ ಆತ್ಮಕಥೆಯಲ್ಲಿ ಒಡೆಯರ್ ನನ್ನನ್ನು ಎಂದೂ ಅನ್ಯಧರ್ಮಿಯರಾಗಿ ಕಾಣಲಿಲ್ಲ ಎಂದಿದ್ದಾರೆ. ದೇಶದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದರು. ಶಿಕ್ಷಣ ಮೇಲ್ವರ್ಗದವರಿಗೆ ಸೀಮಿತವಾಗಬಾರದೆಂದು ಉಚಿತ ಕಡ್ಡಾಯ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದರು. ಮಹಿಳೆಯರು, ಹಿಂದುಳಿದವರಿಗೆ ಪ್ರತ್ಯೇಕ ಶಾಲೆಗಳನ್ನು ತೆರೆದರು. ವಯಸ್ಕರ ಶಿಕ್ಷಣ ಕೂಡ ಇವರ ಆಡಳಿತದಲ್ಲಿ ಜಾರಿಗೆ ಬಂದಿತು. ರಾಜಕೀಯ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿ ಕಂಡಿತು. ಕಲೆ, ಸಂಸ್ಕೃತಿ, ಸಾಹಿತ್ಯದ ಆರಾಧಕರಾಗಿದ್ದರು ಎಂದು ಒಡೆಯರ್ ಅವರ ಕೊಡುಗೆ ನೆನೆದರು. ಕಾರ್ಯಕ್ರಮ ಉದ್ಘಾಟನೆ ನಡೆಸಿದ ಮಳವಳ್ಳಿಯ ವರ್ಚಸ್ವಿ ಸಿದ್ಧಲಿಂಗ ರಾಜೇ ಅರಸ್ ಸ್ವಾಮಿ ಮಾತನಾಡಿ ಮೈಸೂರು ರಾಮರಾಜ್ಯ, ಅಶೋಕ ಚಕ್ರವರ್ತಿ ಆಡಳಿತ, ವಿಜಯನಗರ ಸಾಮ್ರಾಜ್ಯದ ಕುರಿತು ಕೇಳಿ ತಿಳಿದುಕೊಂಡಿದ್ದೇವೆ. ಅದೇ ರೀತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿನಲ್ಲಿ ರಾಮರಾಜ್ಯ, ಸುವರ್ಣ ಯುಗ ನಿರ್ಮಾಣ ಮಾಡಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಸುವರ್ಣ ಯುಗಕ್ಕೆ ಮುನ್ನುಡಿ ಬರೆದರು. ನಾಲ್ವಡಿ ಕೃಷ್ಣರಾಜ ಒಡೆಯರ್ ತ್ಯಾಗ, ಕೊಡುಗೆ ನೀಡಿದ್ದಾರೆ. ಇಂದಿಗೂ ಅವರು ನೀಡಿದ ಕೊಡುಗೆಯ ಸೌಲಭ್ಯ ಪಡೆಯುತ್ತಿದ್ದೇವೆ. ಭಾರತದಲ್ಲಿ ಅದ್ಭುತವನ್ನು ಅವರು ಸೃಷ್ಟಿಸಿದರು. ಪೂರ್ವಜರು ನೀಡಿದ ಕೊಡುಗೆಗಳನ್ನು ಮರೆಯುತ್ತಿದ್ದೇವೆ. ಅವರು ಅಂಥ ಕೊಡುಗೆ ನೀಡದೆ ಇದ್ದರೆ, ಇಂದಿನ ಪರಿಸ್ಥಿತಿ ಹೇಗಿರುತ್ತಿತ್ತು ಯೋಚಿಸಿ. ಅವರು ಬದುಕಿನಲ್ಲಿ ಸಾಕಷ್ಟು ಪರಿಶ್ರಮ ಪಟ್ಟರು. ಅವರ ಜೀವನ ನಮಗೆಲ್ಲ ಆದರ್ಶ. ಅವರ ಆಡಳಿತ ಅಥವಾ ಯಾವುದಾದರೊಂದು ಅಧ್ಯಯನ ಪಠ್ಯದಲ್ಲಿ ಸೇರಿಸಬೇಕು. ಅದು ಮಕ್ಕಳಿಗೆ ಸ್ಫೂರ್ತಿಯಾಗಲಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ. ಆದರೆ, ಜನಪ್ರತಿನಿಧಿಗಳು ಮಾಡದ ಕೆಲಸ ಕಾರ್ಯಗಳನ್ನು ಒಡೆಯರ್ ಮಾಡಿದರು. ಹೀಗಾಗಿ ಅವರ ಆಡಳಿತ ಎಲ್ಲರಿಗೂ ಮಾದರಿಯಾಗಿದೆ. ಹೀಗಾಗಿ ಅವರ ಹೆಸರಿನಲ್ಲಿ ಒಂದು ಹೆಚ್ಚುವರಿಯಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸ ಮಾಡಿದರೆ, ಅದು ಒಡೆಯರ್ ಅವರಿಗೆ ಸಲ್ಲಿಸುವ ಗೌರವ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹಮದ್, ಉಪಾಧ್ಯಕ್ಷ ಜಿ.ನಟರಾಜನ್, ಸದಸ್ಯ ಟಿ.ಎಸ್.ಮಂಜುನಾಥ್, ನಗರಪಾಲಿಕೆ ಉಪ ಮಹಾಪೌರ ರತ್ನ ಲಕ್ಷ್ಮಣ್, ಸದಸ್ಯ ಸುನೀಲ್, ಸೌಕತ್ ಅಲಿ, ಶ್ರೀಕಂಠಯ್ಯ, ಉಮಾವತಿ, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: