ಪ್ರಮುಖ ಸುದ್ದಿ

ಬಸವರಾಜ್​ ಬೊಮ್ಮಾಯಿ ಮನವಿ ಮಾಡಿದ ಹಿನ್ನೆಲೆ ಆಪರೇಷನ್​ ಕಮಲದ ತನಿಖೆ ಮಾಡಲಿಲ್ಲ : ಹೊಸ ಬಾಂಬ್​ ಸಿಡಿಸಿದ ಮಾಜಿ ಸಚಿವ ಎಚ್​.ಡಿ. ರೇವಣ್ಣ

ರಾಜ್ಯ(ಹುಬ್ಬಳ್ಳಿ)ಆ.20:-  ಬಸವರಾಜ್​ ಬೊಮ್ಮಾಯಿ ಅವರು ಆಪರೇಷನ್​ ಕಮಲದ ಬಗ್ಗೆ ತನಿಖೆ ಮಾಡಬೇಡಿ ಎಂದು   ಮನವಿ ಮಾಡಿದ ಹಿನ್ನೆಲೆಯಲ್ಲಿ ನಾವು ತನಿಖೆ ಮಾಡಲಿಲ್ಲ ಎಂದು ಮಾಜಿ ಸಚಿವ ಎಚ್​.ಡಿ. ರೇವಣ್ಣ ಹೊಸ ಬಾಂಬ್​ ಸಿಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ಯಾವುದೇ ತನಿಖೆಗೂ ನಾವು ತಲೆಕೆಡಿಸಿಕೊಳ್ಳಲ್ಲ. ಆಪರೇಷನ್ ಕಮಲ ವಿಚಾರ ಕುರಿತಂತೆ ಬಸವರಾಜ ಬೊಮ್ಮಾಯಿ ಸೇರಿದಂತೆ ಮೂರ್ನಾಲ್ಕು ಜನರು ತನಿಖೆ ಮಾಡಬೇಡಿ‌ ಎಂದು ಮನವಿ ಮಾಡಿದ್ದರು ಅದಕ್ಕಾಗಿ ನಾವು ತನಿಖೆ ಮಾಡಲಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಂತ ಪ್ರವಾಹ ಉಂಟಾಗಿದೆ. ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ನಾವು ಯಾವುದೇ ದ್ವೇಷದ ರಾಜಕೀಯ ಮಾಡಲ್ಲ. ಉತ್ತರ ಕರ್ನಾಟಕ ಭಾಗದ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಅವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವಾಗಬೇಕು.  ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಇಷ್ಟೆಲ್ಲ ಪ್ರವಾಹ ಸಂಭವಿಸಿದರೂ ಕೇಂದ್ರ ಈವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಅನೇಕ ಸಂಘ-ಸಂಸ್ಥೆಗಳು ನೆರೆ ಪರಿಹಾರ ಒದಗಿಸಿವೆ. ರಾಜ್ಯ ಸರ್ಕಾರ ರಾಜ್ಯದಲ್ಲಿ ಈವರೆಗೂ ಯಾವುದೇ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಸಿಎಂ ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಲ್ಲಿ ಏಕಾಂಗಿಯಾಗಿ ಪ್ರವಾಸ ಮಾಡಿದರು. ಅದೇನು ಮಾಡಿದರೋ ನನಗೆ ಗೊತ್ತಿಲ್ಲ. ಕೇಂದ್ರದಿಂದ ನೆರೆ ಪರಿಹಾರ ಮಾತ್ರ ಬಿಡುಗಡೆಯಾಗಲಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯವರದ್ದೇ ಸರ್ಕಾರವಿದೆ. ರಾಜ್ಯದಲ್ಲಿ ಪ್ರವಾಹದಿಂದ ಬೀದಿಗೆ ಬಿದ್ದಿರುವ ಬಡ ಜನರಿಗೆ ಮೊದಲು ಸಹಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಪಕ್ಷವನ್ನು ಮುಳುಗಿಸುವ ಪ್ರಯತ್ನ ನಡೆದಿದ್ದು, ನಾವು ದಡ ಸೇರಲು ಯಾವ ತಯಾರಿ ಬೇಕೋ ಅದನ್ನು ಮಾಡುತ್ತಿದ್ದೇವೆ. ಕುಮಾರಸ್ವಾಮಿ ಅವರನ್ನು ಕೇವಲ ಮಂಡ್ಯ, ಹಾಸನ ಹಾಗೂ ತುಮಕೂರು ಜಿಲ್ಲೆಗಷ್ಟೇ ಸೀಮಿತ ಎಂದು ಹೇಳುತ್ತಿದ್ದರು. ಆದರೆ, ಯಡಿಯೂರಪ್ಪ ಈಗೇನು ಮಾಡಿದ್ದಾರೆ? ಕೇವಲ ಇಪ್ಪತ್ತು ದಿನಗಳಲ್ಲಿ ಯಡಿಯೂರಪ್ಪ ಅವರು ಶಿಕಾರಿಪುರಕ್ಕೆ 2 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹಣ ಬಿಡುಗಡೆ ಕುರಿತ ದಾಖಲೆ ಬಿಡುಗಡೆ ಮಾಡಿ ತಿರುಗೇಟು ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: