ಮೈಸೂರು

ಬೆಂಕಿ ಚಿದಾನಂದ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಕ್ಕೆ ಖಂಡನೆ : ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಮೈಸೂರು,ಆ.21:- ಬೆಂಕಿ ಚಿದಾನಂದ ಮತ್ತವರ ಮಗ ಬೆಂಕಿ ಸ್ನೇಹಿತ್ ಇಬ್ಬರೂ ನ್ಯಾಯಾಲಯಕ್ಕೆ ಸುಳ್ಳು ದಾಖಲಾತಿಯನ್ನು ಸಲ್ಲಿಸಿ ನ್ಯಾಯಾಲಯದಿಂದ ಹೊರಗೆ ಬಂದ ನಂತರ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದಾರೆಂದು ಅಶೋಕ್ ಪುರಂ ಪೊಲೀಸ್ ಠಾಣೆಯಲ್ಲಿ ಕೆ.ರಾಘು ಬಿನ್ ಕೃಷ್ಣ ಅವರು ದೂರು ಸಲ್ಲಿಸಿದ್ದು,  ಅವರು ಸಲ್ಲಿಸಿರುವುದು ಸುಳ್ಳು ದೂರೆಂದು ಆರೋಪಿಸಿ ಮೈಸೂರು ವಕೀಲರು ಇಂದು ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ಘಟನೆ ನಡೆದಿದೆ.

ನ್ಯಾಯಾಲಯದ ಮುಂದೆ ಜಮಾಯಿಸಿದ ವಕೀಲರುಗಳು  ಬೆಂಕಿ ಚಿದಾನಂದ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಸರ್ಕಾರಿ ಅಭಿಯೋಜಕ ಶಿವಶಂಕರ್ ನೀಡಿದ ಕುಮ್ಮಕ್ಕಿನಿಂದಲೇ ದೂರು ನೀಡಲಾಗಿದೆ. ಈಗಾಗಲೇ ಮೈಸೂರು ಜಿಲ್ಲಾ ವಕೀಲರ ಸಂಘಕ್ಕೆ   ಚಿದಾನಂದ ದೂರು ನೀಡಿದ್ದಾರೆ.  ಸರ್ಕಾರಿ ಅಭಿಯೋಜಕ ಶಿವಶಂಕರ್ ಕೃತ್ಯವನ್ನು  ನಾವು ಖಂಡಿಸುತ್ತೇವಲ್ಲದೇ, ಶಿವಶಂಕರ್ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್, ಎಂ.ಆರ್.ಆನಂದ್, ಬಿ.ಎಸ್.ಪ್ರಶಾಂತ್, ಕೆ.ಟಿ.ಸುರೇಶ್, ಎಸ್.ಜಿ.ಶಿವಣ್ಣೇಗೌಡ, ಸಿ.ಕೆ.ರುದ್ರಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ರಾಘು ಬಿನ್ ಕೃಷ್ಣ  ದೂರಿನಲ್ಲೇನಿದೆ ?

ಬೆಂಕಿ ಚಿದಾನಂದ,ಯು.ಗಿರಿಜಾಂಬ, ಸ್ನೇಹಿತ್ ಅವರ ಮೇಲೆ ಕೆ.ರಾಘು ಬಿನ್ ಕೃಷ್ಣ ದೂರು ನೀಡಿದ್ದು, ಈ ದೂರಿನಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 08/2016ರಲ್ಲಿ ಪ್ರಕರಣ ದಾಖಲಿಸಿದ್ದು, ಒಂದನೇ ಎಸಿಜೆ& ಸಿಜೆಎಂ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಕೊಟ್ಟಿದ್ದು, ಸಿಸಿ ನಂಬರ್ 8071/2016ರಲ್ಲಿ ವಿಚಾರಣೆಯಲ್ಲಿದೆ ಎನ್ನಲಾಗಿದೆ. 6/8/2019ರಂದು ನ್ಯಾಯಾಲಯದಲ್ಲಿ ಕೇಸಿನ ವಿಚಾರಣೆಯಿತ್ತು. ಜಯನಗರದಲ್ಲಿನ ನ್ಯಾಯಾಲಯದ ಹೊಸಕಟ್ಟಡದ 04ನೇ ಮಹಡಿಯಲ್ಲಿರುವ ಒಂದನೇ ಎಸಿಜೆ&ಸಿಜೆಎಂ ನ್ಯಾಯಾಲಯಕ್ಕೆ ಹೋದಾಗ ಇದೇ ನ್ಯಾಯಾಲಯಕ್ಕೆ ಬೆಂಕಿ ಚಿದಾನಂದ, ಅವರ ಹೆಂಡತಿ ಗಿರಿಜಾಂಬ ಮತ್ತು ಅವರ ಮಗ ಬೆಂಕಿ ಸ್ನೇಹಿತ್ ಮೂವರು ಬಂದಿದ್ದು, ಕೇಸಿಗೆ ಸಂಬಂಧಿಸಿದಂತೆ ದಾಖಲಾತಿಗಳು ಹಾಗೂ ಬೆಂಕಿ ಚಿದಾನಂದ ಮತ್ತು ಅವರ ಮೇಲೆ ಇರುವ ಸುಮಾರು 40ಕೇಸುಗಳಿಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ನ್ಯಾಯಾಲಯದಲ್ಲಿದ್ದಾಗ ನ್ಯಾಯಾಲಯದ ಆವರಣದಲ್ಲಿಯೇ ಸಂಜೆ 5ಗಂಟೆಯ ಸಮಯದಲ್ಲಿ ಬೆಂಕಿ ಚಿದಾನಂದ ಮತ್ತವರ ಮಗ ಬೆಂಕಿ ಸ್ನೇಹಿತ್ ಇಬ್ಬರೂ ನನಗೆ ನೀನು ಜೀವಂತ ಇದ್ದರೆ ತಾನೇ ದಾಖಲಾತಿಗಳನ್ನು ತೆಗೆದುಕೊಂಡು ನ್ಯಾಯಾಲಯಕ್ಕೆ ಬರುವುದು, ನೀನು ಹೊರಗಡೆ ಬರುತ್ತೀಯಾ ಆಗ ನಿನಗೊಂದು ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿ ನೀನು ಏನು ಮಾಡುತ್ತೀಯಾ ನಾನು ನೋಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

(ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: