ಮೈಸೂರು

ಆಧುನಿಕ ಯುಗದಲ್ಲಿ ಸಿಗುವ ಸೌಲಭ್ಯವನ್ನು ಬಳಸಿಕೊಳ್ಳುವುದಕ್ಕಿಂತ ದುರುಪಯೋಗ ಪಡಿಸಿಕೊಳ್ಳುತ್ತಿರುವವರೇ ಜಾಸ್ತಿ : ಕುಲಪತಿ ಪ್ರೊ. ಡಾ.ವಿದ್ಯಾಶಂಕರ್ ಎಸ್.ಬೇಸರ

‘ಸೋಮಾನಿ ಸಂಭ್ರಮ-2019’ ‘ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್.ಎಸ್.ಎಸ್.ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ’

ಮೈಸೂರು,ಆ.21:- ಆಧುನಿಕ ಯುಗದಲ್ಲಿ ಸಿಗುವ ಸೌಲಭ್ಯವನ್ನು ಬಳಸಿಕೊಳ್ಳುವುದಕ್ಕಿಂತ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರೇ ಜಾಸ್ತಿ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಾ.ವಿದ್ಯಾಶಂಕರ್ ಎಸ್.ಬೇಸರ ವ್ಯಕ್ತಪಡಿಸಿದರು.

ಅವರಿಂದು ಬಾಸುದೇವ ಸೋಮಾನಿ ಕಾಲೇಜಿನ ಆವರಣದಲ್ಲಿ ದಿ ಇನ್ಸಟಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ಬಾಸುದೇವ ಸೋಮಾನಿ ಕಾಲೇಜಿನ ವತಿಯಿಂದ ‘ಸೋಮಾನಿ ಸಂಭ್ರಮ-2019’ ‘ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್.ಎಸ್.ಎಸ್.ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ’ಯನ್ನು ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳಿದ್ದಲ್ಲಿ ಮಾತ್ರ ಕಾಲೇಜು, ಹಾಗಂತ ಕೇವಲ ವಿದ್ಯಾರ್ಥಿಗಳಿದ್ದಾಕ್ಷಣ ಕಾಲೇಜಾಗಲ್ಲ. ಉತ್ತಮ ಅಧ್ಯಾಪಕರಿದ್ದಾಗ ಮಾತ್ರ ಕಾಲೇಜಿಗೆ ಹೆಸರು ಬರೋದು ಸಾಧ್ಯವಿಲ್ಲ, ವಿದ್ಯಾರ್ಥಿಗಳು, ಅಧ್ಯಾಪಕರು, ಕಾಲೇಜು ಆಡಳಿತ ಮಂಡಳಿ ಮೂರು ಸಮನಾಗಿ ನಡೆದಾಗ ಮಾತ್ರ ಕಾಲೇಜಿಗೆ ಉತ್ತಮ ಹೆಸರು ಬರಲು ಸಾಧ್ಯ ಎಂದರು.

ವಿದ್ಯಾರ್ಥಿ ರ್ಯಾಂಕ್ ಪಡೆದಾಗ ನಿಮಗೂ ಹೆಸರು, ಕಾಲೇಜಿಗೂ ಹೆಸರು. ವಿದ್ಯಾರ್ಥಿಗಳ ಬೆಳವಣಿಗೆ ಕೇವಲ ಓದುವುದರಿಂದ ಮಾತ್ರ ಸಾಧ್ಯವಿಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಾಗ ಮಾತ್ರ ಪ್ರತಿಭಾವಂತನಾಗಿ ಹೊರಹೊಮ್ಮಲು ಸಾಧ್ಯ ಎಂದು ಎಂದರು. ಸಾಂಸ್ಕೃತಿಕ, ಕ್ರೀಡಾಚಟುವಟಿಕೆ ವಿದ್ಯಾರ್ಥಿ ಜೀವನದ ಒಂದು ಭಾಗ. ನಮ್ಮ ದೇಶದಲ್ಲಿ 130ಕೋಟಿ ಜನಸಂಖ್ಯೆಯಿದೆ. ನಾವು ಒಲಂಪಿಕ್ ನಲ್ಲಿ ಗೆಲ್ಲುವುದು ಒಂದೋ ಎರಡೋ ಚಿನ್ನದ ಪದಕ ಮಾತ್ರ, ಅದೇ ಚಿಕ್ಕ ರಾಷ್ಟ್ರವಾದ ಕೀನ್ಯಾ 11ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು. ಎಲ್ಲೋ ಒಂದು ಕಡೆ ನಮ್ಮ ಜವಾಬ್ದಾರಿ ಏನು ಎನ್ನುವುದನ್ನು ಮರೆಯುತ್ತಿದ್ದೇವೆ. ನಿಜವಾಗಲೂ ನಾನೇನಾಗಬೇಕು? ಏನು ಮಾಡಬೇಕು ಎನ್ನುವುದನ್ನು ಪಿಯುಸಿಗೆ ಬಂದಾಗಲೇ ನಿರ್ಧರಿಸಬೇಕು. ನಾನು ಮಾಡಬೇಕಾಗಿರುವ ಕೆಲಸದ ಮೇಲೆ ಶ್ರದ್ಧೆ ವಹಿಸಬೇಕು. ಶ್ರದ್ಧೆ ಇಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ. ಕಷ್ಟಪಟ್ಟು ಓದಿದರೆ ಶಿಕ್ಷಕರ ಸಹಾಯ ಇದ್ದೇ ಇರಲಿದೆ. ಇಂದು ಗ್ರಾಮೀಣ ವಿದ್ಯಾರ್ಥಿಗಳು, ನಗರದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನೀಡುತ್ತಿದ್ದಾರೆ. ನಾವಾಗ ಶಾಲೆಗೆ ಹೋಗುವಾಗ ಮನೆಯಲ್ಲಿ ಮಾರ್ಕ್ಸ್ ಕಾರ್ಡ್  ಕೇಳುತ್ತಿರಲಿಲ್ಲ. ಈಗ ಪೋಷಕರು ಮಕ್ಕಳ ಹಿಂದೆಯೇ ಇರುತ್ತಾರೆ ಎಂದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯ ಸಿಗದಿದ್ದರೂ ಅವರು ಮುಂದೆ ಬರುತ್ತಿದ್ದಾರೆ. ಆದರೆ ನಗರ ವಿದ್ಯಾರ್ಥಿಗಳು ಸೌಲಭ್ಯ ಸಿಕ್ಕರೂ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ. ನಾವು ಬೇರೆ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಇಷ್ಟಪಡುತ್ತೇವೆಯೇ ಹೊರತು, ಬೇರೆ ದೇಶದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ವಿಷಾದಿಸಿದರು. ನಮ್ಮ ದೇಶದವರೇ ಅಮೇರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ? ಇಲ್ಯಾಕೆ ಮಾಡುತ್ತಿಲ್ಲ ಎಂಬ ಚಿಂತನೆ ನಡೆಸಿ. ಕಠಿಣ ಶ್ರಮ ಮಾತ್ರ ನಿಮ್ಮನ್ನು ಗುರಿ ಮುಟ್ಟಿಸಲು ಸಹಕರಿಸುವ ನಿಜವಾದ ಮಾರ್ಗ. ಸಾಧನೆಗೆ ಅಡ್ಡದಾರಿಗಳಿಲ್ಲ. ಸಿಕ್ಕ ಅವಕಾಶವನ್ನು ಅಳವಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ವಾಲಿಬಾಲ್ ತರಬೇತುದಾರ ಡಾ.ಎನ್.ಬಿ.ಸುರೇಶ್, ದಿ.ಇನ್ಸಟಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹೆಚ್.ಎನ್.ನಾಗರಾಜ್, ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಪುಟ್ಟಸ್ವಾಮಿ, ಪ್ರಾಂಶುಪಾಲರಾದ ಡಾ.ಎಂ.ಮಹದೇವಯ್ಯ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: