ದೇಶಪ್ರಮುಖ ಸುದ್ದಿ

ವಿಶ್ವಾಸ ಮತ ಗೆದ್ದ ಪಳನಿ ಸ್ವಾಮಿ : ತಮಿಳುನಾಡು ರಾಜಕೀಯ ಅನಿಶ್ಚಿತತೆಗೆ ತೆರೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ವಿಶ್ವಾಸಮತ ಪಡೆಯುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಇದರೊಂದಿಗೆ ಕಳೆದ 14 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಅನಿಶ್ಚಿತತೆಗೆ ತೆರೆ ಬಿದ್ದಂತಾಗಿದೆ.

ಡಿಎಂಕೆ ಹೊರಗಿಟ್ಟು ವಿಶ್ವಾಸ ಮತ :

ಇಂದು ಬೆಳಗ್ಗೆ ವಿಶ್ವಾಸಮತ ಯಾಚನೆ ಆರಂಭವಾದಾಗ ರಹಸ್ಯ ಮತದಾನಕ್ಕೆ ಅವಕಾಶ ಕೋರಿ ಡಿಎಂಕೆ ಸೇರಿದಂತೆ ಪ್ರತಿಪಕ್ಷಗಳು ಗದ್ದಲ ನಡೆಸಿದವು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿ ಮಧ್ಯಾಹ್ನ 3 ಗಂಟೆಗೆ ಸದನವನ್ನು ಮುಂದೂಡುವಂತಾಗಿತ್ತು.

ಮಧ್ಯಾಹ್ನ 3 ಗಂಟೆಗೆ ಸದನ ಮತ್ತೆ ಸಮಾವೇಶಗೊಂಡಾಗ ಗದ್ದಲ ಎಬ್ಬಿಸುತ್ತಿದ್ದ ಡಿಎಂಕೆ ಸದಸ್ಯರನ್ನು ಉಚ್ಛಾಟಿಸಿದ ಸ್ಪೀಕರ್ ಧನಪಾಲ್ ಅವರು ಮಾರ್ಷಲ್‍ಗಳ ಮೂಲಕ ಹೊರಗೆ ಕಳುಹಿಸಿದರು.

ನಂತರ ಪಳನಿ ಸ್ವಾಮಿ ಅವರು ವಿಶ್ವಾಸ ಮತ ನಿರ್ಣಯ ಮಂಡನೆ ಮಾಡಿದರು. ಗದ್ದಲದ ನಡುವೆಯೇ ಧ್ವನಿ ಮತದ ಮೂಲಕ ವಿಶ್ವಾಸ ಮತ ಎಣಿಕೆ ಮಾಡಲಾಯಿತು. ಈ ವೇಳೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ 122 ಮತಗಳು ಲಭಿಸಿದರೆ, ಅವರ ವಿರುದ್ಧ ಕೇವಲ 11 ಶಾಸಕರು ಮತ ನೀಡಿದರು.

ಹರಿದ ಅಂಗಿಯೊಂದಿಗೆ ಆಚೆ ಬಂದ ಸ್ಟಾಲಿನ್ :

ಮಾರ್ಷಲ್‍ಗಳು ಮತ್ತು ಶಾಸಕರ ನಡುವೆ ತಳ್ಳಾಟ ಸಂಭವಿಸಿ ಬಹುತೇಕ ಶಾಸಕರ ಶರ್ಟ್ ಮತ್ತು ಪಂಚೆಗಳು ಹರಿದು ಹೋದವು. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕೂಡ ಹರಿದ ಶರ್ಟ್‍ನಲ್ಲಿಯೇ ಮಾಧ್ಯಮಗಳನ್ನು ಕರೆದು ಪ್ರತಿಕ್ರಿಯೆ ನೀಡಿದ್ದು ಸದನದಲ್ಲಿನ ಕೋಲಾಹಲಕ್ಕೆ ಸಾಕ್ಷಿಯಂತಿತ್ತು. ಈ ವೇಳೆ ಮಾತನಾಡಿದ ಸ್ಟಾಲಿನ್, ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಸದನದಲ್ಲಿ ನಡೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

30 ವರ್ಷಗಳ ನಂತರ ವಿಶ್ವಾಸಮತ ಯಾಚನೆ :

ತಮಿಳುನಾಡು ವಿಧಾನಸಭೆಯಲ್ಲಿ 30 ವರ್ಷಗಳ ಹಿಂದೆ 1988ರಲ್ಲಿ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ನಡೆದಿತ್ತು. ಎಂಜಿಆರ್‌ ಸಾವಿನ ಬಳಿಕ ಅಧಿಕಾರ ವಹಿಸಿಕೊಂಡ ಅವರ ಪತ್ನಿ ಜಾನಕಿ ಅವರ ಸರ್ಕಾರಕ್ಕೆ ಶಾಸಕರ ಬೆಂಬಲ ಸಾಬೀತುಪಡಿಸಲು ಅಂದು ವಿಶ್ವಾಸ ಮತ ಯಾಚನೆ ಮಾಡಲಾಗಿತ್ತು. ಇದಾದ ನಂತರ 30 ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಇದೇ ಮೊದಲು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಪಕ್ಷದ ಮೇಲೆ ಯಾರ ಹಿಡಿತ?

ಸರ್ಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಶಶಿಕಲಾ ಕ್ಯಾಂಪ್‍ ಪಕ್ಷದ ಮೇಲೂ ಹಿಡಿತ ಸಾಧಿಸುವ ಸಾಧ್ಯತೆ ಇದೆ. ವಿಪರಿಹಾಸವೆಂದರೆ ವಿರೋಧಿ ಪನ್ನೀರ್‍ ಸೆಲ್ವಂ ಕ್ಯಾಂಪ್‍ನಲ್ಲಿರುವ ಪಕ್ಷದ ಅಧ್ಯಕ್ಷ ಮಧುಸೂದನ್ ಅವರು ಇಡೀ ಶಶಿಕಲಾ ಕ್ಯಾಂಪ್‍ ಅನ್ನೇ ಪಕ್ಷದಿಂದ ಉಚ್ಛಾಟಿಸಿದ್ದಾರೆ. ಆದರೆ ಈಗ ಸರ್ಕಾರವೇ ಶಶಿಕಲಾ ಕ್ಯಾಂಪ್‍ ಹಿಡಿತಕ್ಕೆ ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನೋಟಿಸ್‍ಗೆ ಶಶಿಕಲಾ ಏನು ಉತ್ತರಿಸಿಲಿದ್ದಾರೆ? ಪಕ್ಷವನ್ನು ಚುನಾವಣಾ ಆಯೋಗವನ್ನು ಯಾರ ಕೈಗೆ ನೀಡಲಿದೆ ಎನ್ನುವುದು ಸದ್ಯದ ಪ್ರಶ್ನೆ?

ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿಯವರೂ ರಾಜಕೀಯ ಅನುಭವ ಉಳ್ಳ ವ್ಯಕ್ತಿಯಾಗಿದ್ದು, ಪಕ್ಷವು  ಶಶಿಕಲಾ ಗುಂಪಿನ ಹಿಡಿತಕ್ಕೆ ಸಿಕ್ಕರೆ ಪನ್ನೀರ್ ಸೆಲ್ವಂ ಮತ್ತು ಬೆಂಬಲಿಗ ಶಾಸಕರು ರಾಜಕೀಯ ಹಿನ್ನಡೆ ಎದುರಿಸಬೇಕಾಗಬಹುದು.

Leave a Reply

comments

Related Articles

error: