ಪ್ರಮುಖ ಸುದ್ದಿಮೈಸೂರು

ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳುವವರೆಗೂ ಬಾಡಿಗೆ ಮನೆ ಬದಲಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಿ : ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚನೆ

ಮೈಸೂರು,.ಆ23:-  ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳುವವರೆಗೂ ಬಾಡಿಗೆ ಮನೆ ಬದಲಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಿ ಎಂದು ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚಿಸಿದರು.

ನೆರೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ  ಕರೆದಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರ 50 ಸಾವಿರ ರೂ. ನೆರವು ನೀಡುತ್ತದೆ. ಇದರಿಂದ ಸಂತ್ರಸ್ತರು ಬಾಡಿಗೆ ಮನೆಗೆ ಹೋಗುವುದು ತಪ್ಪುತ್ತದೆ. ತಮ್ಮ ಜಾಗದಲ್ಲಿ ಶೆಡ್ ಹಾಕಿಕೊಂಡು ಮನೆ ನಿರ್ಮಾಣ ಕೆಲಸ ಮಾಡಿಕೊಳ್ಳಬಹುದು. ಅಧಿಕಾರಿಗಳು ಈ ಸಂಬಂಧ ಸಮೀಕ್ಷೆ ನಡೆಸಿ ಎಷ್ಟು ಸಂತ್ರಸ್ತರಿಗೆ ಇದು ಒಪ್ಪಿಗೆ ಇದೆ ಎಂದು ಎರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಿದರು.

ಸರ್ಕಾರ ನಿರಾಶ್ರಿತರಿಗೆ ಎಲ್ಲ ರೀತಿಯ ಸಹಾಯ ಮಾಡಲು   ಸಿದ್ಧವಿದೆ. ನಿರಾಶ್ರಿತರ ಕ್ಯಾಂಪ್‌ಗಳಲ್ಲಿದ್ದ ಎಲ್ಲರಿಗೂ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ನೀಡಲಾಗುತ್ತದೆ. ಕೇಂದ್ರ ಸರ್ಕಾರದಿಂದಲೂ ಹೆಚ್ಚುವರಿಯಾಗಿ 2 ಲಕ್ಷ ರೂ. ಪರಿಹಾರ ಕೊಡಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಳೆ ಮತ್ತು ನೆರೆಯಿಂದಾಗಿ ಸಾವಿರಾರು ಮನೆಗಳು ಹಾಳಾಗಿದ್ದು, ಶಾಲಾ ಮತ್ತು ಅಂಗನವಾಡಿ ಕಟ್ಟಡಗಳು ಶಿಥಿಲಗೊಂಡಿವೆ. ರಸ್ತೆಗಳು, ಸೇತುವೆಗಳು ಹಾಳಾಗಿದ್ದು, ಬೆಳೆ ಕೂಡ ನೀರುಪಾಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತಾಲೂಕಿನ ಅಧಿಕಾರಿಗಳು ನಷ್ಟದ ಬಗ್ಗೆ ವರದಿ ನೀಡಿದ್ದಾರೆ. 109 ಕೋಟಿ ರೂ. ಪರಿಹಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಬಂದಿದ್ದು, ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಅಂಗನವಾಡಿ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಕಟ್ಟಡ ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು. ಹೆಚ್ಚು ಮಳೆಯಾಗಿರುವ ಕಾರಣ ಶಾಲಾ ಕಟ್ಟಡಗಳ ಗೋಡೆಗಳು ಶಿಥಿಲವಾಗಿರುತ್ತದೆ. ಅವು ಕುಸಿಯುವ ಸಂಭವ ಕೂಡ ಇರುತ್ತದೆ ಎಂದರು.

ನೆರೆಯಿಂದಾಗಿ ನದಿ ಪಾತ್ರ ಮತ್ತು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಹಾಡಿಗಳಲ್ಲಿನ ಮನೆಗಳೂ ಹಾನಿಯಾಗಿದ್ದು, ಅವರ ಪುನರ್ವಸತಿಗೆ ಕಾನೂನು ತೊಡಕಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೃಷಿ ಜಮೀನು ಹಾನಿಯಾಗಿರುವ ಕುರಿತು ಸರ್ವೇ ಮಾಡಿ ನಂತರ ಸಂತ್ರಸ್ತ ರೈತರಿಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಕೆಲಸ ಮಾಡಬೇಕು. ಸಂತ್ರಸ್ತರ ರಕ್ಷಣೆಗೆ ಮುಂದಾಗಿ ಮಾನವೀಯತೆ ಮೆರೆಯಬೇಕು. ದೇವಸ್ಥಾನಗಳಿಗೆ ಹೋದರೆ ಪುಣ್ಯ ಬರುವುದಿಲ್ಲ. ಬದಲಿಗೆ ಇಂತಹ ಪರಿಸ್ಥಿತಿಯಲ್ಲಿ ಜನರಿಗಾಗಿ ದುಡಿದರೆ ಪುಣ್ಯ ಬರುತ್ತದೆ ಎಂದರು. ನೆರೆಯಿಂದ ಹಾನಿಯಾಗಿದ್ದ ಮನೆಯಲ್ಲಿ ವಿದ್ಯುತ್ ಸ್ಪರ್ಶದಿಂದ ರೈತರೊಬ್ಬರು ಮೃತಪಟ್ಟಿದ್ದರೂ ಸೆಸ್ಕ್ ಅಧಿಕಾರಿಗಳು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ಸಭೆಯ ಗಮನಕ್ಕೆ ತಂದರು. ಇದರಿಂದ ಅಧಿಕಾರಿಗಳ ಮೇಲೆ ಕೋಪಗೊಂಡ ಸಚಿವರು, ಪರಿಹಾರ ಕೊಡಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಅದಕ್ಕೆ ಸೆಸ್ಕ್ ಅಧಿಕಾರಿ ಪ್ರತಿಕ್ರಿಯಿಸಿ, ಮನೆಯಲ್ಲಿ ವಿದ್ಯುತ್ ಅವಘಡವಾಗಿರುವುದರಿಂದ ಪರಿಹಾರ ಕೊಡಲು ಬರುವುದಿಲ್ಲ ಎಂದು ಉತ್ತರಿಸಿದರು. ಅದಕ್ಕೆ ಪ್ರತ್ಯುತ್ತರ ನೀಡಿದ ಸಚಿವ ಅಶೋಕ್, ಸರ್ಕಾರದಿಂದ ಆದೇಶ ಮಾಡುತ್ತಿದ್ದೇನೆ. ಅವರಿಗೆ ಪರಿಹಾರ ಕಲ್ಪಿಸಿ ಇಲ್ಲದೆ ಇದ್ದರೆ ಮನೆಗೆ ಓಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ನೆರೆಯಿಂದ ಜಿಲ್ಲೆಯಲ್ಲಿ 5 ಜನರು ಸಾವಿಗೀಡಾಗಿದ್ದಾರೆ. ಈ ಪೈಕಿ 4 ಮೃತರ ಕುಟುಂಬಕ್ಕೆ ಈಗಾಗಲೇ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದ ಕುಟುಂಬಕ್ಕೆ ಪರಿಹಾರ ನೀಡಲು ಮೃತರ ಸಂಬಂಧಿಕರೇ ಸಿಗುತ್ತಿಲ್ಲ. 3 ಸಾವಿರಕ್ಕೂ ಹೆಚ್ಚು ಮನೆಗಳು ಹಾಳಾಗಿದ್ದು, ತಕ್ಷಣ ಎಲ್ಲರಿಗೂ ತಲಾ 10 ಸಾವಿರ ರೂ. ಪರಿಹಾರ ಚೆಕ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 35 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಇದರಲ್ಲಿ ಒಟ್ಟು 3,529 ಜನ ಆಶ್ರಯ ಪಡೆದಿದ್ದರು. ಈ ಪೈಕಿ ನಂಜನಗೂಡಿನಲ್ಲಿ ತೆರೆದಿದ್ದ 14 ಕೇಂದ್ರಗಳಲ್ಲಿ 2037 ಜನ ಇದ್ದಾರೆ. ನೆರೆಯಿಂದ ಜಿಲ್ಲೆಯಲ್ಲಿ ಒಟ್ಟು 3660 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಕಬ್ಬು, ಅಡಿಕೆ, ತೆಂಗು, ಶುಂಠಿ ಸೇರಿದಂತೆ ಅನೇಕ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ನೆರೆಯಿಂದಾಗಿ ನದಿ ಪಾತ್ರದಲ್ಲಿನ ಕೆಲ ಗ್ರಾಮಗಳು ಪದೇಪದೆ ಜಲಾವೃತಗೊಂಡು ಗ್ರಾಮದ ಜನರು ಸಂತ್ರಸ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹ ಗ್ರಾಮಗಳನ್ನು ಸ್ಥಳಾಂತರಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಶಾಸಕರಾದ ಎಲ್.ನಾಗೇಂದ್ರ, ಕೆ.ಮಹದೇವು, ಅನಿಲ್ ಚಿಕ್ಕಮಾದು, ಹರ್ಷವರ್ಧನ, ಎಂಎಲ್ಸಿ ಸಂದೇಶ್ ನಾಗರಾಜು, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಪಂ ಸಿಇಒ ಕೆ. ಜ್ಯೋತಿ, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಎಸ್ಪಿ ರಿಷ್ಯಂತ್ ಸಿಂಗ್ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: