ಮೈಸೂರು

ಬೆಂಗಳೂರು-ಮೈಸೂರು ನಡುವೆ ವಿಮಾನ ಸಂಚಾರ ಆರಂಭವಾಗಿ ಒಂದೇ ತಿಂಗಳಿನಲ್ಲಿ ಸಾವಿರಕ್ಕೂ ಅಧಿಕ ಪ್ರಯಾಣಿಕರಿಂದ ಪ್ರಯಾಣ

ಮೈಸೂರು,ಆ.24:-  ಕಳೆದ ಜೂನ್ ತಿಂಗಳಿನಿಂದ ಬೆಂಗಳೂರು-ಮೈಸೂರು ನಡುವೆ ವಿಮಾನ ಸಂಚಾರ ಆರಂಭವಾಗಿದ್ದು, ಒಂದೇ ತಿಂಗಳಿನಲ್ಲಿ 1000ಕ್ಕೂ ಹೆಚ್ಚು ಪ್ರಯಾಣಿಕರು ಉಭಯ ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ.

ಏರ್ ಇಂಡಿಯಾದ ಅಂಗಸಂಸ್ಥೆ ಅಲೈಯನ್ಸ್ ಏರ್ ಜೂನ್ 7 ರಿಂದ ಉಡಾನ್ ಯೋಜನೆಯಡಿಯಲ್ಲಿ ಬೆಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಂಕಿಅಂಶಗಳ ಪ್ರಕಾರ 605 ಪ್ರಯಾಣಿಕರು ಬೆಂಗಳೂರಿನಿಂದ ಮೈಸೂರಿಗೆ ಹಾಗೂ 581 ಪ್ರಯಾಣಿಕರು ಮೈಸೂರಿನಿಂದ ಬೆಂಗಳೂರಿಗೆ ಈವರೆಗೆ ಪ್ರಯಾಣಿಸಿದ್ದಾರೆ.

ಮಂಗಳವಾರ ಮತ್ತು ಬುಧವಾರಗಳನ್ನು ಹೊರತುಪಡಿಸಿ ವಾರದಲ್ಲಿ ಐದು ದಿನಗಳು 70 ಆಸನಗಳ ಅಲೈಯನ್ಸ್ ಏರ್ ಉಭಯ ನಗರಗಳ ನಡುವೆ ಕಾರ್ಯನಿರ್ವಹಿಸುತ್ತಿದೆ. ಬಹುದಿನಗಳ ನಂತರ 2017ರಿಂದ ಮೈಸೂರಿನಿಂದ ಚೆನ್ನೈಗೆ ಮಾತ್ರ ವಿಮಾನ ಸಂಚಾರ ಆರಂಭಿಸಿತ್ತು. ಇದೀಗ ಕೇಂದ್ರದ ಉಡಾನ್‌ -3 ಯೋಜನೆಯಂತೆ ಮೈಸೂರು ಹಾಗೂ ಬೆಂಗಳೂರು, ವಿಜಯವಾಡ-ವೈಜಾಗ್‌ ನಡುವೆ ವಿಮಾನಯಾನ ಆರಂಭವಾಗಿದೆ.

ಜೂನ್ ತಿಂಗಳಿನಲ್ಲಿ ಒಟ್ಟು 3,446 ಪ್ರಯಾಣಿಕರು ಚೆನ್ನೈ ಮತ್ತು ಮೈಸೂರು ನಡುವೆ ವಿಮಾನದ ಮೂಲಕ ಪ್ರಯಾಣಿಸಿದರೆ, 174 ಪ್ರಯಾಣಿಕರು ವಿಜಯವಾಡಕ್ಕೆ ಮತ್ತು 103 ಪ್ರಯಾಣಿಕರು ಮೈಸೂರಿನಿಂದ ವಿಶಾಖಪಟ್ಟಣಂಗೆ ಪ್ರಯಾಣಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: