ಪ್ರಮುಖ ಸುದ್ದಿ

ಗೌಡ ಜನಾಂಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಅ.12 ರಂದು ಚಾಲನೆ

ರಾಜ್ಯ(ಮಡಿಕೇರಿ) ಆ.24 :- ಚೆಟ್ಟಳ್ಳಿಯ ಶ್ರೀಮಂಗಲ ಕಂಪೆನಿ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಗೌಡ ಜನಾಂಗದ ಕುಟುಂಬಗಳಿಗಾಗಿ ಸಿಎಸ್‍ಪಿಆರ್ ಸ್ಮಾರಕ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಅಕ್ಟೋಬರ್ 12 ಮತ್ತು 13 ರಂದು ಮಡಿಕೇರಿಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶ್ರೀಮಂಗಲ ಶ್ರೀಮಂಗಲ ಕಂಪೆನಿ ಕಲ್ಚರಲ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ವಕ್ತಾರ ದಂಬೆಕೋಡಿ ಎಸ್. ಹರೀಶ್ ಅವರು, ಗೌಡ ಜನಾಂಗದ ಹತ್ತು ಕುಟುಂಬ 18 ಗೋತ್ರದವರಿಗಾಗಿ ಕುಟುಂಬವಾರು ಪಂದ್ಯಾವಳಿಯನ್ನು 3ನೇ ಬಾರಿಗೆ ಮಡಿಕೇರಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಪಂದ್ಯಾವಳಿಯು 12 ವರ್ಷದ ಒಳಗಿನವರಿಗೆ, 13 ರಿಂದ 25 ವರ್ಷ ಹಾಗೂ 26 ವರ್ಷ ಮೇಲ್ಪಟ್ಟವರಿಗೆ ಒಟ್ಟು 13 ವಿಭಾಗಗಳಲ್ಲಿ ನಡೆಯಲಿದೆ. ಇದರಲ್ಲಿ ಮಿಕ್ಸ್‍ಡ್ ಡಬಲ್ಸ್‍ಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂದರಲ್ಲದೆ, ಕುಟುಂಬಸ್ಥರ ಸಂಖ್ಯೆ ಕಡಿಮೆ ಇರುವವರು ಈ ಮೇಲಿನ ಯಾವುದೇ ವಿಭಾಗಗಳಲ್ಲಿ ಭಾಗವಹಿಸಬಹುದು ಎಂದು ನುಡಿದರು.
ಈ ಬಾರಿಯ ಶಟಲ್ ಪಂದ್ಯಾವಳಿಯ ಟ್ರೋಫಿ ಹಾಗೂ ನಗದು ಬಹುಮಾನವನ್ನು ಕೆದಂಬಾಡಿ ಹಾಗೂ ಪೇರಿಯನ ಕುಟುಂಬದವರು ಅವರ ಹಿರಿಯರ ಜ್ಞಾಪಕಾರ್ಥವಾಗಿ ಪ್ರಾಯೋಜಿಸಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವವರು ಸೆ.21ರ ಒಳಗಾಗಿ ಮಡಿಕೇರಿಯ ಕೆಳಗಿನ ಗೌಡ ಸಮಾಜದ ವ್ಯವಸ್ಥಾಪಕ ಬೊಳ್ತಜಿ ಅಶೋಕ್ ಅವರನ್ನು (ಮೊ.9448503524)ಸಂಪರ್ಕಿಸಿ ಮಾಹಿತಿ ಪಡೆದು ಹೆಸರು ನೋಂದಾಯಿಸಿಕೊಳ್ಳಬಹುದು. ಅಲ್ಲದೆ, ಹೆಚ್ಚಿನ ಮಾಹಿತಿಗೆ ಅಸೋಸಿಯೇಷನ್‍ನ ಪದಾಧಿಕಾರಿಗಳಾದ ಅಧ್ಯಕ್ಷ ಅಯ್ಯಂಡ್ರ ಆರ್ ಭೀಮಯ್ಯ (ಮೊ.9449276379), ಉಪಾಧ್ಯಕ್ಷ ದಂಬೆಕೋಡಿ ಎಸ್. ಹರೀಶ್ (ಮೊ.9448976364) ಅವರನ್ನು ಸಂಪರ್ಕಿಸಬಹುದು ಎಂದರು.
ಪಂದ್ಯಾವಳಿಯು ಬೆಳಗ್ಗೆ 8.30 ರಿಂದ ಸಂಜೆ 5.30ರವರೆಗೆ ನಡೆಯಲಿದ್ದು, ಪ್ರವೇಶಾತಿಗಳು ಹೆಚ್ಚಿದ್ದಲ್ಲಿ ಪಂದ್ಯಾವಳಿಯನ್ನು ಮತ್ತೊಂದು ದಿನಕ್ಕೆ ವಿಸ್ತರಿಸಲಾಗುವುದು. ಪಂದ್ಯಾವಳಿಯ ಸಮಾರೋಪ ಸಮಾರಂಭ ಮಡಿಕೇರಿಯ ಕೆಳಗಿನ ಗೌಡ ಸಮಾಜದಲಿ ರಾತ್ರಿ 7 ಗಂಟೆಗೆ ನಡೆಸಲು ಉದ್ದೇಶಿಸಲಾಗಿದೆಯೆಂದು ತಿಳಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಅಯ್ಯಂಡ್ರ ಆರ್. ಭೀಮಯ್ಯ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವ 1942 ರಲ್ಲಿ ಸಮಾನ ಮನಸ್ಕರಾದ ಕೆದಂಬಾಡಿ ಕೆ. ಚಿಣ್ಣಪ್ಪ, ದಂಬೆಕೋಡಿ ಬಿ. ಸುಬ್ರಾಯ, ಪೇರಿಯನ ಎಂ. ಪೂವಯ್ಯ, ಅಯ್ಯಂಡ್ರ ಕೆ. ರಾಮಪ್ಪ ಅವರುಗಳು ಒಗ್ಗೂಡಿ ಚೆಟ್ಟಳ್ಳಿಯಲ್ಲಿ ಸುಮಾರು 120 ಏಕರೆ ಜಾಗದಲ್ಲಿ ಕಾಫಿ ತೋಟವನ್ನು ಶ್ರೀಮಂಗಲ ಕಂಪೆನಿ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿದ್ದು, ಅವರ ಅಂದಿನ ಪ್ರಯತ್ನದ ಫಲವಾಗಿ ಇಂದು ನೂರಾರು ಏಕರೆ ಕಾಫಿ ತೋಟವನ್ನು ಕಂಪೆನಿ ಹೊಂದುವಂತಾಗಿದೆ. ಇವರುಗಳಿಗೆ ಕಂಪೆನಿ ತೋಟ ಖರೀದಿಸಲು ಹಣದ ನೆರವು ನೀಡಿ ಸಹಕರಿಸಿದ ಅಯ್ಯಂಡ್ರ ಕೆ. ರಾಮಪ್ಪ ಅವರ ತಾಯಿ ಬೆಳ್ಯವ್ವ ಅವರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಈ ನಾಲ್ವರು ಕಂಪೆನಿಯನ್ನು ಪ್ರಾರಂಭಿಸಿದ್ದಲ್ಲದೆ, ಹಲವಾರು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡು ತಮ್ಮ ಊರುಗಳಲ್ಲಿ ಶಾಲಾ ಕಾಲೇಜುಗಳನ್ನು ತೆರೆದಿದ್ದಾರೆ. ಅದರಂತೆ ಚೆಟ್ಟಳ್ಳಿ , ನಂಜರಾಯಪಟ್ಟಣಗಳಲ್ಲಿ ಪ್ರೌಢಶಾಲೆಗಳು ಹಾಗೂ ಗುಡ್ಡೆಹೊಸೂರಿನಲ್ಲಿ ಪ್ರಾಥಮಿಕ ಶಾಲೆಯನ್ನು ಆರಂಭಿಸಿದ್ದರು. ಇದರ ಜೊತೆಗೆ ಅವರವರ ಊರುಗಳಲ್ಲಿ ದೇವಸ್ಥಾನಗಳ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ಧಾರ ಕಾರ್ಯಗಳಿಗೂ ಸಹಕರಿಸಿದ್ದರು. ಕೇವಲ ಜನಾಂಗಕ್ಕೆ ಮಾತ್ರವಲ್ಲದೆ ಹಲವಾರು ಬಡ ಕುಟುಂಬಗಳಿಗೆ ಕಾಫಿ ತೋಟ ಮಾಡಲು ಮಾರ್ಗದರ್ಶನ ನೀಡಿದ್ದಲ್ಲದೆ, ತಾವೇ ಮುಂದೆ ನಿಂತು ಕಾಫಿ ತೋಟ ನಿರ್ಮಿಸಿಕೊಟ್ಟ ಉದಾಹರಣೆಗಳು ಇವೆ. ಗೌಡ ಜನಾಂಗದ ವಿದ್ಯಾಸಂಘ, ಸಮಾಜಗಳನ್ನು ಕಟ್ಟಲು ಪ್ರೋತ್ಸಾಹ ನೀಡಿದ್ದಲ್ಲದೆ, ತಾವೇ ಮುಂದೆ ನಿಂತು ಕಟ್ಟಿಸಿದ್ದರು. ಇವರ ಕೃಷಿ ಚಟುವಟಿಕೆಗಳನ್ನು ಗುರುತಿಸಿ ಬ್ರಿಟೀಷರು ಹಲವಾರು ಪ್ರಶಂಸನಾ ಪತ್ರಗಳನ್ನು ನೀಡಿದ್ದರು ಎಂದು ಸ್ಮರಿಸಿದರು.
ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷ ಪೇರಿಯನ ಪಿ. ಜಯಾನಂದ, ಮಾತನಾಡಿ ಸ್ವತಃ ಕ್ರೀಡಾಪಟುಗಳಾಗಿದ್ದ ಇವರುಗಳು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದುದಲ್ಲದೆ, ಹಲವಾರು ಕ್ರೀಡಾಕೂಟಗಳನ್ನು ನಡೆಸಿದ್ದಾರೆ ಎಂದರು. ಅವರ ಸವಿ ನೆನಪಿಗಾಗಿ 2006 ಮತ್ತು 2013 ರಲ್ಲಿ ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಸಿಎಸ್‍ಪಿಆರ್( ಚಿನ್ನಪ್ಪ, ಸುಬ್ರಾಯ, ಪೂವಯ್ಯ, ರಾಮಪ್ಪ) ಸ್ಮರಣಾರ್ಥ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಸಲಾಗಿದ್ದು, ಇದೀಗ 3ನೇ ಬಾರಿಗೆ ಮಡಿಕೇರಿಯಲ್ಲಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ದಂಬೆಕೋಡಿ ಸಿ.ಪುರುಷೋತ್ತಮ, ಖಜಾಂಚಿ ಪೇರಿಯನ ಪಿ.ನವೀನ್ ಹಾಗೂ ಸಂಯೋಜಕ ದಂಬೆಕೋಡಿ ಎಸ್. ಪೂವಯ್ಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: