ಪ್ರಮುಖ ಸುದ್ದಿ

ಗುಡ್ಡ ಕುಸಿದ ತೋರ ಗ್ರಾಮಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ : ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ನೀಡುವ ಭರವಸೆ

ರಾಜ್ಯ(ಮಡಿಕೇರಿ) ಆ.24 :- ಮಹಾಮಳೆಯ ಗುಡ್ಡ ಕುಸಿತದಿಂದ ಜೀವಹಾನಿಯಾದ ತೋರ ಗ್ರಾಮದ ಘಟನಾ ಸ್ಥಳಕ್ಕೆ ಸಂಸದ ಪ್ರತಾಪ ಸಿಂಹ ಅವರು ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಭೂ ಕುಸಿತದಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಪ್ರಭು ಕುಮಾರ್ ಭಟ್ ಮತ್ತು ಹರೀಶ್ ಅವರನ್ನು ಭೇಟಿಯಾಗಿ, ಸಾಂತ್ವನ ನುಡಿದ ಸಂಸದರು, ಇದೇ ಸಂದರ್ಭ ನಾಪತ್ತೆಯಾದವರ ಶೋಧ ಕಾರ್ಯಾಚರಣೆಯನ್ನು ವೀಕ್ಷಿಸಿ, ತಂಡದ ಮುಖ್ಯಸ್ಥರೊಂದಿಗೆ ಕಾರ್ಯಾಚರಣೆಯ ಮಾಹಿತಿ ಪಡೆದರು.
ಸೂರು ಒದಗಿಸುವ ಭರವಸೆ- ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರವು ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ ಸಂಸದರು, ರಾಜ್ಯ ಸರ್ಕಾರ ಸಂತ್ರಸ್ತರಿಗೆ ನೀಡಿದ ಪರಿಹಾರದೊಂದಿಗೆ ಕೇಂದ್ರ ಸರ್ಕಾರದಿಂದಲೂ ಪರಿಹಾರ ಧನವನ್ನು ನೀಡಲಾಗುತ್ತದೆಂದು ಸ್ಪಷ್ಟಪಡಿಸಿದರು.
ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರಿ ಜಮೀನು ಅಥವ ಖಾಸಗಿ ಜಮೀನನ್ನು ಸರ್ಕಾರದ ಮೂಲಕ ಖರೀದಿಸಿ ಸೂರು ಒದಗಿಸುವ ಭರವಸೆಯನ್ನು ನೀಡಿ, ಪ್ರಾಕೃತಿಕ ವಿಕೋಪದಲ್ಲಿ ಕೃಷಿ ಫಸಲು ಹೊಂದಿದ ಭೂಮಿಯನ್ನು ಹಲವರು ಕಳೆದುಕೊಂಡಿದ್ದಾರೆ. ಇಂತಹವರಿಗೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ತಾಲ್ಲೂಕು ತಹಶೀಲ್ದಾರ್ ಪುರಂದರ ಅವರಿಂದ ಪರಿಹಾರ ಕಾರ್ಯಗಳ ಬಗ್ಗೆ ಸಂಸದರು ಮಾಹಿತಿ ಪಡೆದುಕೊಂಡರು.
ಸಂಸದರ ತೋರ ಭೇಟಿ ಸಂದರ್ಭ ಕಂದಾಯ ಅಧಿಕಾರಿ ಪಳಂಗಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಜಿಪಂ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಪಂ ಸದಸ್ಯರಾದ ಬಿ.ಎಂ. ಗಣೇಶ್, ಪಿಡಿಒ ಪ್ರಮೋದ್ ಕುಮಾರ್ ಮೊದಲಾದವರಿದ್ದರು. (ಕೆಸಿಐ,.ಎಸ್.ಎಚ್)

Leave a Reply

comments

Related Articles

error: