ಪ್ರಮುಖ ಸುದ್ದಿ

ಕಾಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಪಂಚಭೂತಗಳಲ್ಲಿ ಲೀನ

ದೇಶ(ನವದೆಹಲಿ)ಆ.25:-    ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕೀಯ ಧುರೀಣ  ಅರುಣ್ ಜೇಟ್ಲಿ (66) ನಿನ್ನೆ ದೀರ್ಘಕಾಲಿಕ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಇಂದು  ಸಕಲ ಸರ್ಕಾರಿ ಗೌರವಗಳೊಂದಿಗೆ ದೆಹಲಿಯ ನಿಗಮ್​ ಬೋಧ್​ ಘಾಟ್​ನಲ್ಲಿ ಜೇಟ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಅರುಣ್ ಜೇಟ್ಲಿ ಅವರು ಪಂಚಭೂತಗಳಲ್ಲಿ ಲೀನವಾಗಿದ್ದು, ಇನ್ನು ನೆನಪು ಮಾತ್ರ.

ಅವರ ಪುತ್ರ ರೋಹನ್‌ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.  ಅರುಣ್ ಜೇಟ್ಲಿ ಅವರು ಭಾರತದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡಿದ್ದರು.  ಪ್ರಧಾನಿ ಮೋದಿಯವರು ವಿದೇಶ ಪ್ರವಾಸದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿ  ಬಿಜೆಪಿಯ ಇತರೆ ಹಿರಿಯ ನಾಯಕರು, ಸಚಿವರ ಸಮ್ಮುಖದಲ್ಲಿ ಜೇಟ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು.

ಅರುಣ್ ಜೇಟ್ಲಿ ಅಂತಿಮಯಾತ್ರೆ  ಬಿಜೆಪಿ ಕಚೇರಿಯಿಂದ  ಆರಂಭಗೊಂಡು ನಿಗಮ್ ಭೋದ್ ಘಾಟ್‌ವರೆಗೆ ನಡೆಯಿತು. ಈ ವೇಳೆ ಹಲವು ನಾಯಕರು ಜೇಟ್ಲಿ ಅವರ ಅಂತಿಮ ದರ್ಶನ ಪಡೆದರು. ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಸಚಿವ ರಾಜನಾಥ್‌ ಸಿಂಗ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌  ಸೇರಿದಂತೆ ಬಿಜೆಪಿಯ ಹಲವು ನಾಯಕರು ಅಂತಿಮ ದರ್ಶನ ಪಡೆದರು.

ರಾಜ್ಯದಿಂದ ಸಿಎಂ ಬಿ ಎಸ್‌ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಸೇರಿದಂತೆ ಬಸವರಾಜ್ ಬೊಮ್ಮಾಯಿ, ಗೋವಿಂದ ಕಾರಜೋಳ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಂತಿಮ ದರ್ಶನ ಪಡೆದರು. (ಎಸ್.ಎಚ್)

Leave a Reply

comments

Related Articles

error: