ಪ್ರಮುಖ ಸುದ್ದಿಮೈಸೂರು

ಕುಮಾರಸ್ವಾಮಿ ನನ್ನನ್ನು ಮಿತ್ರ, ಸ್ನೇಹಿತ, ವಿಶ್ವಾಸಿ ಅಂತ ಭಾವಿಸದೇ ಶತ್ರು ಅಂತ ನೋಡಿದ್ದಕ್ಕೆ ಇಷ್ಟೆಲ್ಲ ಸಮಸ್ಯೆ ಆಗಿರೋದು : ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು,ಆ.26:- ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅನೈತಿಕತೆಯಿಂದ ಆಗಿರುವ ಸರ್ಕಾರ. ಇದು ಸಂವಿಧಾನ ಬದ್ಧವಾಗಿ ಆಗಿರುವ ಸರ್ಕಾರ ಅಲ್ಲ. ಬಿಜೆಪಿ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿರೋದು. ಒಂದು ಕಡೆ ಅತೃಪ್ತರಿಗೂ ಏನೂ ಮಾಡಕ್ಕಾಗದೆ ಇದ್ದಾರೆ. ಯಡಿಯೂರಪ್ಪ ಸಿಎಂ ಆಗಿ 26 ದಿನಗಳಾದ್ರೂ ಯಾವುದೇ ಖಾತೆಗಳನ್ನು ಹಂಚಿಲ್ಲ. ರಾಜ್ಯದಾದ್ಯಂತ ಭೀಕರ ನೆರೆಹಾವಳಿ ಬಂದಿದ್ದು ಯಡಿಯೂರಪ್ಪ ಕೇಂದ್ರದಿಂದ ಒಂದು ರೂಪಾಯಿ ತರಕ್ಕೆ ಆಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಿನ್ನೆ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದಿದ್ದು, ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಬಂದು ನೆರೆ ವೀಕ್ಷಣೆ ಮಾಡಿಲ್ಲ. ನಾನು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಹೇಳಿದ್ದೇನೆ. ಯಡಿಯೂರಪ್ಪ ಡೆಲ್ಲಿಗೆ ಹೋಗ್ತಾರೆ ಬರ್ತಾರೆ, ಡೆಲ್ಲಿಗೆ ಹೋಗ್ತಾರೆ ಬರ್ತಾರೆ. ಮೋದಿನೂ, ಅಮಿತ್ ಶಾ ನೂ  ಭೇಟಿಯಾಗಕ್ಕೆ ಆಗಿಲ್ಲ. ರಾಜ್ಯದ ಸಿಎಂ ಯಡಿಯೂರಪ್ಪ ಒಲ್ಲದ ಶಿಶುವಾಗಿದ್ದಾರೆ. ಬಿಜೆಪಿ ಹೈಕಮಾಂಡ್ಗೂ  ಒಲ್ಲದ ಶಿಶುವಾಗಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ 113 ಸ್ಥಾನಗಳು ಬಂದಿದ್ದಾವಾ? ಜನ ಮತ ಹಾಕಿ‌ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದಾರಾ? ಇಲ್ಲ ಹಾಗಾಗಿ ಯಡಿಯೂರಪ್ಪ ಒಲ್ಲದ ಶಿಶುವಾಗಿದ್ದಾರೆ. ಬಿಜೆಪಿಯವರು ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಕೊಂಡಿರೋರು. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ ಎಂದರು.

ಅನರ್ಹ ಶಾಸಕರು ಅತಂತ್ರರಾಗಿದ್ದಾರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಅನರ್ಹರಾಗಿ ಅತಂತ್ರರಾಗಬೇಕು ಅನ್ನೋದೆ ನಮ್ಮ ಉದ್ದೇಶ. ಅದಕ್ಕೆ ನಾನು, ದಿನೇಶ್ ಗುಂಡೂರಾವ್ ಅವರ ಅನರ್ಹತೆಗೆ ಅರ್ಜಿ‌ ಕೊಟ್ಟಿದ್ದೇವೆ ಎಂದರು. ಬಿಜೆಪಿ ಅಲ್ಲ ನನ್ನ ಮೊದಲ ಶತ್ರು ಸಿದ್ದರಾಮಯ್ಯ ಎಂದಿರುವ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ  ಅದೇ ತಪ್ಪಾಗಿದ್ದು ನನ್ನನ್ನು ಮಿತ್ರ, ಸ್ನೇಹಿತ, ವಿಶ್ವಾಸಿ ಅಂತ ಭಾವಿಸಿಲ್ಲ, ಬದಲಾಗಿ ಶತ್ರು ಅಂತ ನೋಡಿದ್ದಕ್ಕೆ ಇಷ್ಟೆಲ್ಲ ಸಮಸ್ಯೆ ಉಂಟಾಗಿದ್ದು ಅವರು ಸರಿಯಾಗಿ ತಿಳಿದು ಕೊಂಡಿದ್ರೆ ಇಷ್ಟೆಲ್ಲ ಆಗ್ತಿರ್ಲಿಲ್ಲ ಎಂದು ವ್ಯಂಗ್ಯವಾಡಿದರು.  ನಾನು ಗುಮಾಸ್ತನಾಗಿ ಕೆಲಸ ಮಾಡಿದ್ದೇನೆ ಎಂದಿರುವ  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಆಡಳಿತ ಮಾಡೋಕೆ ಬರದೆ ಇರೋರು ಹಾಗೇಯೇ ತಿಳಿದು ಕೊಳ್ಳೋದು ಎಂದರು.

ಈ ಸಂದರ್ಭ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್, ಮರಿಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: