ದೇಶಪ್ರಮುಖ ಸುದ್ದಿ

ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ತಡೆ ಹಿಡಿದ ಸುಪ್ರೀಂ ಕೋರ್ಟ್

ದೇಶ(ನವದೆಹಲಿ)ಆ.26:- ಐಎನ್ ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಕೇಸುಗಳಿಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಿಗದಿಯಾಗಿತ್ತು. ಆದರೆ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಡೆ ಹಿಡಿದಿದೆ. ಅವರಿಗೆ ಹಿನ್ನಡೆಯಾದಂತಾಗಿದೆ.

ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ವಿರುದ್ಧ ಸಿಬಿಐ ಹೊರಡಿಸಿದ್ದ ಬಂಧನ ವಾರಂಟ್ ಮತ್ತು ಸಿಬಿಐ ಕಸ್ಟಡಿಗೊಪ್ಪಿಸಿ ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಸಲ್ಲಿಸಿದ್ದ ಹೊಸ ಅರ್ಜಿ ವಿಚಾರಣೆ ಸಹ ನ್ಯಾಯಮೂರ್ತಿ ಆರ್ ಭಾನುಮತಿ ನೇತೃತ್ವದ ನ್ಯಾಯಪೀಠ ಇಂದು ಕೈಗೆತ್ತಿಕೊಳ್ಳಬೇಕಾಗಿತ್ತು.

ಜಾರಿ ನಿರ್ದೇಶನಾಲಯ ಅವರನ್ನು ಇಂದಿನವರೆಗೆ ಬಂಧಿಸದಂತೆ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ರಕ್ಷಣೆ ನೀಡಿತ್ತು. ಚಿದಂಬರಂ ಮನವಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಳಿ ನ್ಯಾಯಾಲಯ ವಿವರಣೆ ಕೇಳಿ ಎಲ್ಲಾ ಮೂರು ಪ್ರಕರಣಗಳ ಅರ್ಜಿ ವಿಚಾರಣೆಯನ್ನು ಇಂದಿಗೆ ನಿಗದಿಪಡಿಸಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಾಗಬೇಕಾದ ಆದ್ಯತೆ ಕೇಸುಗಳ ಪಟ್ಟಿಯಲ್ಲಿ ಚಿದಂಬರಂ ಅವರ ಅರ್ಜಿ ವಿಚಾರಣೆ ಇಲ್ಲವಾಗಿದೆ.

ಜುಲೈ 20 ಮತ್ತು 21ರಂದು ತಮ್ಮ ಅರ್ಜಿ ವಿಚಾರಣೆ ನಡೆಸದೆ ತಮ್ಮನ್ನು ಆಗಸ್ಟ್ 21ರ ರಾತ್ರಿ ಬಂಧಿಸಲಾಗಿದೆ, ಇದು ಸಂವಿಧಾನದ ಅನುಚ್ಛೇದ 21ರ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿ ಚಿದಂಬರಂ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. (ಎಸ್.ಎಚ್)

Leave a Reply

comments

Related Articles

error: