ಮೈಸೂರು

ಗುರಿ ಸಾಧನೆಗಾಗಿ ಕಠಿಣ ತಪಸ್ಸು ಆಚರಿಸಿದ ಪ್ರಾಚೀನ ಋಷಿಮುನಿಗಳ ಪರಂಪರೆಯನ್ನು ಇಂದಿನ ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು : ಚಿಂತಕ ಚಕ್ರವರ್ತಿ ಸೂಲಿಬೆಲೆ

ಮೈಸೂರು, ಆ.28:- ಗುರಿ ಸಾಧನೆಗಾಗಿ ಕಠಿಣ ತಪಸ್ಸು ಆಚರಿಸಿದ ಪ್ರಾಚೀನ ಋಷಿಮುನಿಗಳ ಪರಂಪರೆಯನ್ನು ಇಂದಿನ ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು ಎಂದು ಸಂಸ್ಕೃತಿ ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಅವರು ನಿನ್ನೆ ಸನಾತನ ಸಭಾದಿಂದ ‘ಪ್ರಾಚೀನ ಋಷಿ-ಮುನಿಗಳು ಅಂತರಂಗ-ಬಹಿರಂಗ’ ಕುರಿತು ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ  ನಾಲ್ಕು ದಿನಗಳ ಕಾಲ ಆಯೋಜಿಸಿದ ಉಪನ್ಯಾಸ ಮಾಲಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿನ ತರುಣರು ಸಿನಿಮಾ ನಟರು, ರಾಜಕಾರಣಿಗಳನ್ನು ಐಕಾನ್‌ಗಳನ್ನಾಗಿ ಸ್ವೀಕರಿಸುವ ಬದಲು ಮಿಶ್ವಾಮಿತ್ರ ಸೇರಿದಂತೆ ಪ್ರಾಚೀನ ಋಷಿಗಳನ್ನು ಆದರ್ಶವಾಗಿಟ್ಟುಕೊಂಡು ಮಾರ್ಗದರ್ಶನ ಪಡೆಯಬೇಕು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ನಾಗರಿಕತೆ-ಪರಂಪರೆ ಬಗ್ಗೆ ಇಂದಿನ ತರುಣರು ತಿಳಿದುಕೊಳ್ಳಬೇಕು. ಮಿಶ್ವಾಮಿತ್ರ-ವಸಿಷ್ಠ ಮಹರ್ಷಿ ಸೇರಿದಂತೆ ಅನೇಕಾನೇಕ ಋಷಿ, ಮುನಿಗಳು ಲೋಕಕಲ್ಯಾಣ, ಧರ್ಮ ಸಂಸ್ಥಾಪನೆಗಾಗಿ ತಮ್ಮ ಶಕ್ತಿಯನ್ನೆಲ್ಲಾ ವ್ಯಯಿಸಿದ್ದಾರೆ. ಅಂತವರನ್ನು ನಾವು ಆದರ್ಶ ಮಾಡಿಕೊಳ್ಳಬೇಕು ಎಂದರು.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮಪ್ರಜ್ಞೆ ಎಲ್ಲರಲ್ಲೂ ಮೊಳಕೆಯೊಡುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕಳೆದೆರಡು ವರ್ಷಗಳಿಂದ ಮಕ್ಕಳು ಕೃಷ್ಣ ವೇಷಾಧಾರಿಗಳಾಗುತ್ತಿರುವುದು ಹಾಗೂ ಮಡಕೆ ಒಡೆಯುವ ಸ್ಪರ್ಧೆ ಸಮಾಜದಲ್ಲಿ ಹೆಚ್ಚುತ್ತಿರುವುದೇ ಸಾಕ್ಷಿ ಎಂದು ಬಣ್ಣಿಸಿದರು. ದೇಶದ ಮೇಲೆ ಬ್ರಿಟಿಷರು, ಮೊಘಲರ ದಾಳಿ ಸಂದರ್ಭದಲ್ಲೂ ಹಿಂದೂ ಧರ್ಮ ಮತ್ತು ಸಂಸ್ಕೃತಿ ಮರೆಯಾಗಿಲ್ಲ. ಅದನ್ನು ನಮ್ಮ ಸಾಧು-ಸಂತರು ವೇದ-ಉಪನಿಷತ್ ತತ್ವಗಳನ್ನು ಪ್ರಚಾರ ಮಾಡುತ್ತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಣೆಗೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ಸಂಶೋಧಕ ಡಾ.ಎಚ್.ವಿ.ನಾಗರಾಜರಾವ್, ಕರ್ನಾಟಕ ಮುಕ್ತ ವಿವಿ ಪ್ರಾಧ್ಯಾಪಕಿ ಡಾ.ಜ್ಯೋತಿಶಂಕರ್, ಸನಾತನ ಸಭಾ ಅಧ್ಯಕ್ಷ ಎನ್.ಎಸ್.ದ್ವಾರಕಾನಾಥ್, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್.ರಾಮಪ್ರಸಾದ್, ಕಾರ್ಯದರ್ಶಿ ವಿದ್ವಾನ್ ಗ.ನಾ.ಭಟ್ಟ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: