ಮೈಸೂರು

ಪ್ರಯತ್ನ ಪಡದೇ ಸಾಧನೆ ಮಾಡಲು ಸಾಧ್ಯವಿಲ್ಲ : ಪ್ರೊ.ಆರ್.ಮೂಗೇಶಪ್ಪ

2019-20ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ

ಮೈಸೂರು,ಆ.28:-  ಪ್ರಯತ್ನ ಪಡದೇ ಸಾಧನೆ ಮಾಡಲು ಸಾಧ್ಯವಿಲ್ಲ, ನಿಮಗೆ ಅರ್ಥವಾಗದ ವಿಷಯಗಳನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಿ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ ತಿಳಿಸಿದರು.

ಅವರಿಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದ ‘2019-20ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಚಟುವಟಿಕೆ’ಗಳ ಉದ್ಘಾಟನೆಯನ್ನು  ನೆರವೇರಿಸಿ ಮಾತನಾಡಿದರು. ಮಹಾರಾಣಿ ಕಾಲೇಜು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಅದಕ್ಕಾಗಿಯೇ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು  ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿ, ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಬಹುದು, ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗುವವರಲ್ಲಿ ಮನನ ಮಾಡುವ ಸಾಮರ್ಥ್ಯ ಹೆಚ್ಚಿದೆ ಎಂದರ್ಥ, ದ್ವಿತೀಯ ಶ್ರೇಣಿಯವರಲ್ಲಿ ಸ್ವಲ್ಪ ಕಡಿಮೆ, ತೃತೀಯ ಶ್ರೇಣಿಯವರಲ್ಲಿ ಇನ್ನೂ ಸ್ವಲ್ಪ ಕಡಿಮೆ ಇರಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಇಲ್ಲಿ ಓದಲಿಕ್ಕೆಂದೇ ಬರೋದು ಎಂದರು.

ವಿದ್ಯಾರ್ಥಿಗಳು ಓದನ್ನು ಸವಾಲಾಗಿ ಸ್ವೀಕರಿಸಬೇಕು. ಇಂದು ಬೆಳಿಗ್ಗೆ 5ಗಂಟೆಗೆ ಎದ್ದು ಓದಿನತ್ತ ಗಮನ ಹರಿಸಬೇಕೆಂದು ಅಲಾರಾಂ ಇಟ್ಟು ಮಲಗಿದರೆ, ನಾಳೆ ಇದೊಂದು ದಿನ ಬೇಡ ನಾಳೆಯಿಂದ ನೋಡೋಣ ಎಂದುಕೊಂಡರೆ ಮರುದಿನವಾದರೂ ನಮಗೆ ಆಸಕ್ತಿಯಿರುವ ವಿಷಯವನ್ನು ಓದಲು ಆರಂಭಿಸಬೇಕು. ಐದಾರು ಮಂದಿ ಸೇರಿಕೊಂಡು ವಿಷಯದ ಮೇಲೆ ಸಮೂಹ ಚರ್ಚೆ ನಡೆಸಬೇಕು. ಮೊಬೈಲ್, ಟಿವಿ, ತೊಂದರೆಯಾಗುವ ವಸ್ತುಗಳಿಂದ ದೂರವಿರಬೇಕು. ನಾನು ಕೂಡ ಸರ್ಕಾರಿ ಕಾಲೇಜಿನಲ್ಲಿಯೇ ಓದಿದ್ದು. ನಮಗೆ ಗೊತ್ತಿಲ್ಲದ ವಿಷಯವನ್ನು ತಿಳಿದವರಿಂದ ಕೇಳಿ ತಿಳಿದುಕೊಳ್ಳಬೇಕೇ ಹೊರತು ಮುಜುಗರಪಟ್ಟುಕೊಳ್ಳಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಟಿ.ವಿಜಯ್, ಅಧ್ಯಾಪಕ ಕಾರ್ಯದರ್ಶಿ ಪ್ರೊ.ಮಹದೇವಯ್ಯ, ಪ್ರೊ.ಮನೋನ್ಮಣಿ, ಡಾ.ಪರಶಿವಮೂರ್ತಿ ಹೆಚ್, ಡಾ.ಜಗದೀಶ್ ಟಿ.ಎಲ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: