
ಪ್ರಮುಖ ಸುದ್ದಿ
ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ತೆನ್ನಿರಾ ಮೈನಾ
ರಾಜ್ಯ(ಮಡಿಕೇರಿ) ಆ.29 :- ಎಐಸಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ನೇತೃತ್ವದಲ್ಲಿ ಇದೇ ಸೆ.3 ಮತ್ತು 4 ರಂದು ಮಹಾರಾಷ್ಟ್ರದ ಸೇವಾಗ್ರಾಮದಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರಾಮೈನಾ ಅವರು ಪ್ರತಿನಿಧಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಮೀನಾಕ್ಷಿ ನಟರಾಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಹತ್ವಪೂರ್ಣವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ದೇಶದ ಮಧ್ಯಭಾಗದಲ್ಲಿ ತಮ್ಮ ಕಾರ್ಯಚಟುವಟಿಕೆಯನ್ನು ಮುಂದುವರಿಸಲು ನಿರ್ಧರಿಸಿದ್ದರು. 1936 ರ ಏಪ್ರಿಲ್ನಲ್ಲಿ ಮಹಾರಾಷ್ಟ್ರದ ವಾರ್ದಾ ಜಿಲ್ಲೆಯ ಸೆಗಾಸ್ ಎಂಬ ಹಳ್ಳಿಯಲ್ಲಿ ತಮಗೆ ಮತ್ತು ತಮ್ಮ ಅನುಯಾಯಿಗಳಿಗೆ ಕುಟೀರಗಳನ್ನು ನಿರ್ಮಿಸಿ ಸೇವಾಗ್ರಾಮ ಎಂದು ನಾಮಕರಣ ಮಾಡಿದರು.
ನಂತರ ಪತ್ನಿ ಕಸ್ತೂರಿಬಾ ಅವರೊಂದಿಗೆ ವಾಸಿಸಲು ಆರಂಭಿಸಿದರು. 1936 ರಿಂದ 1948 ರವರೆಗೆ ಇಲ್ಲಿಯೇ ಜೀವಿಸಿದ್ದ ಬಾಪೂರವರು ಅನೇಕ ಸ್ವಾತಂತ್ರ್ಯ ಚಳುವಳಿಯ ಹೋರಾಟದ ರೂಪುರೇಷೆಗಳನ್ನು ಇದೇ ಸ್ಥಳದಲ್ಲಿ ಸಿದ್ಧಪಡಿಸಿದರು. ಇಂತಹ ಅರ್ಥಗರ್ಭಿತ ಪ್ರದೇಶದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ಹೆಗ್ಗಳಿಕೆಯ ಸಂಕೇತವಾಗಿದ್ದು, ಜಿಲ್ಲೆಯಿಂದ ತೆನ್ನಿರಾ ಮೈನಾ ಅವರು ಪಾಲ್ಗೊಳ್ಳುತ್ತಿರುವುದು ಸ್ವಾಗತಾರ್ಹವೆಂದು ಮಂಜುನಾಥ್ ಕುಮಾರ್ ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)