ಪ್ರಮುಖ ಸುದ್ದಿ

ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಜನಜಾಗೃತಿ

ರಾಜ್ಯ( ಮಡಿಕೇರಿ) ಆ.29 :- ಶಾಲಾ ಪರಿಸರ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆ.29 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಸಂತ ಮೈಕಲ್ಲರ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತು ಜನಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಅವರು ತಿಳಿಸಿದ್ದಾರೆ.
ಆಂದೋಲನದಲ್ಲಿ ಪಿಒಪಿ ಮತ್ತು ರಾಸಾಯನಿಕ ಬಣ್ಣ ಬಳಸದೇ ನೈಸರ್ಗಿಕವಾಗಿ ಜೇಡಿ ಮಣ್ಣಿನಿಂದ ಗಣೇಶ ವಿಗ್ರಹಗಳನ್ನು ತಯಾರಿಸಿ ಬಳಕೆ ಮಾಡುವುದು ಸೇರಿದಂತೆ ಜಲಮೂಲಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ರಾಷ್ಟ್ರೀಯ ಹಸಿರು ಪಡೆ ಮತ್ತು ರಾಜ್ಯದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಎಂಪ್ರಿ)ಯ ಪರಿಸರ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಗಣೇಶ ಹಬ್ಬದ ಸಂದರ್ಭ ಬೆಳಗ್ಗಿನ ಸಾಮೂಹಿಕ ಪ್ರಾರ್ಥನಾ ವೇಳೆಯಲ್ಲಿ ಇಕೋ ಕ್ಲಬ್ ಮೂಲಕ ಶಿಕ್ಷಕರು ಮಕ್ಕಳಿಗೆ ‘ಪರಿಸರ ಸ್ನೇಹಿ ಹಸಿರು ಗಣೇಶೋತ್ಸವ ಆಚರಣೆಯ ಮಹತ್ವ ಮತ್ತು ಜಲಮೂಲಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ‘ಪರಿಸರ ಸ್ನೇಹಿ’ ಗಣೇಶೋತ್ಸವ ಆಚರಣೆ ಕುರಿತಂತೆ ಜನಜಾಗೃತಿ ನಡೆಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಲು ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೊ ಅವರು ಹೇಳಿದ್ದಾರೆ.
ಇದರ ಅಂಗವಾಗಿ ಮಕ್ಕಳಿಗೆ ‘ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹ ತಯಾರಿಕೆ ಮತ್ತು ಪ್ರತಿಷ್ಠಾಪನೆಯ ಅಗತ್ಯತೆ’ ಕುರಿತಂತೆ ಚಿತ್ರಕಲೆ, ವಿವಿಧ ಸ್ಪರ್ಧೆ ಸೇರಿದಂತೆ ಕ್ಲೇ ಮಾಡಲಿಂಗ್ ಸ್ಪರ್ಧೆ ಮೂಲಕ ಜೇಡಿ ಮಣ್ಣಿನಿಂದ ಗಣೇಶ ವಿಗ್ರಹ ತಯಾರಿಕೆ ಮಾಡಿ ಬಳಕೆ ಮಾಡುವ ಕುರಿತು ಅರಿವು ಮೂಡಿಸಲು ತಿಳಿಸಲಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: