ದೇಶಪ್ರಮುಖ ಸುದ್ದಿ

ನಟಿ ಭಾವನಾಗೆ ಕಿರುಕುಳ ನೀಡಿದ ಕುರಿತು ಅತಿರಂಜಿತ ವರದಿ: ಮಾಧ್ಯಮಗಳ ವಿರುದ್ಧ ಮಲಯಾಳಂ ಚಿತ್ರರಂಗ ಕಿಡಿ

ಕೊಚ್ಚಿ: ನಟಿ ಭಾವನಾ ಅವರಿಗೆ ಅವರ ಕಾರು ಚಾಲಕರೇ ಕಿರುಕುಳ ನೀಡಿದ ಪ್ರಕರಣವನ್ನು ಅತಿರಂಜಿತ ರೀತಿಯಲ್ಲಿ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಮಲಯಾಳಂ ಚಿತ್ರರಂಗ ಕಿಡಿ ಕಾರಿದೆ.

ಚಾನೆಲ್‍ಗಳ ಟಿಆರ್‍ಪಿ, ಪತ್ರಿಕೆಗಳ ಪ್ರಸರಣ ಹೆಚ್ಚಿಸಿಕೊಳ್ಳಲು ಸಾಕಷ್ಚು ಒಳ್ಳೆಯ ಮಾರ್ಗಗಳಿವೆ. ಈ ವಿಷಯದಲ್ಲಿ ಓರ್ವ ಹೆಣ್ಣುಮಗಳ ಭವಿಷ್ಯದ ಪ್ರಶ್ನೆಯಿದೆ ಎಂಬುದನ್ನು ಮಾಧ್ಯಮಗಳು ಅರ್ಥ ಮಾಡಿಕೊಳ್ಳಬೇಕು. ನಾವು ಮಾಡುವ ಒಂದು ದುಡುಕಿನಿಂದಾಗಿ ಆಕೆಯ ಭವಿಷ್ಯದ ಮೇಲೆ ಮಂಕು ಕವಿಯುವ ಸಾಧ್ಯತೆ ಇದೆ. ಈ ಕಾರಣದಿಂದ ಈ ಪ್ರಕರಣದಲ್ಲಿ ಅತಿರಂಜಿತ ವರದಿ ಮಾಡಬಾರದು ಎಂದು ನಟರು ಮನವಿ ಮಾಡಿದ್ದಾರೆ.

ನಟ ಸಲ್ಮಾನ್ ದುಲ್ಖರ್ ಅವರೂ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರತಿಯೊಬ್ಬರ ಮನೆಯಲ್ಲೂ ಹೆಣ್ಣುಮಕ್ಕಳಿರುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ನಟಿಯರಾದ ಲಕ್ಷ್ಮೀ ರೈ, ಮೀರಾ ನಂದನ್, ನಟ ಟೊವಿನೋ ಥಾಮಸ್, ಭಾಮಾ ಕೂಡ ಘಟನೆ ಕುರಿತಂತೆ ಕಿಡಿಕಾರಿದ್ದಾರೆ.

ಚಿತ್ರೀಕರಣ ಮುಗಿಸಿ ಕೊಚ್ಚಿಗೆ ಆಗಮಿಸುತ್ತಿದ್ದ ನಟಿ ಭಾವನಾ ಅವರ ಕಾರು ಚಾಲಕ ಮಾರ್ಟಿನ್ ಮಾರ್ಗ ಮಧ್ಯೆ ಅಪಘಾತ ಮಾಡಿದ್ದಾನೆ. ಈ ವೇಳೆ ಏನಾಯಿತು ಎಂದು ನಟಿ  ಕೆಳಗಿಳಿದಾಗ ಹೊರಗೆ ಇದ್ದ ದುಷ್ಕರ್ಮಿಗಳು ಕಾರು ಹತ್ತಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ಆಕೆಯನ್ನು ಮಾರ್ಗಮಧ್ಯೆ ಬಿಟ್ಟು ಪರಾರಿಯಾಗಿದ್ದಾರೆ.

ಬಳಿಕ ನಿರ್ದೇಶಕಕರೊಬ್ಬರ ನೆರವು ಪಡೆದ ನಟಿ ಭಾವನಾ, ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ದಿನವೇ ಕಾರು ಚಾಲಕ ಮಾರ್ಟಿನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಎಂಬಾತನನ್ನೂ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು ಇತರೆ ನಾಲ್ಕು ಮಂದಿ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.

ನಟಿ ಭಾವನಾ ಅವರ ಮಾಜಿ ಕಾರು ಚಾಲಕನಾಗಿದ್ದ ಸುನಿ, ನಟಿಯ ಬೆತ್ತಲೆ ಚಿತ್ರಗಳನ್ನು ತೆಗೆದು ಅವುಗಳನ್ನಿಟ್ಟುಕೊಂಡು ಬೆದರಿಕೆ ಹಾಕುವ ಯೋಜನೆ ರೂಪಿಸಿದ್ದಾನೆ. ಅಪಹರಣ ಮಾಡಿ ಫೋಟೋಗಳನ್ನು ತೆಗೆದರೆ ಅವರು ಪೊಲೀಸರಿಗೆ ದೂರು ನೀಡುವುದಿಲ್ಲ ಎಂಬುದು ಇವರುಗಳ ಲೆಕ್ಕಾಚಾರವಾಗಿತ್ತು. ಈ ಕಾರಣಕ್ಕೆ ಅಪಹರಣ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇವಲ ನಟಿ ಭಾವನಾ ಅಷ್ಟೇ ಅಲ್ಲ. ದಕ್ಷಿಣ ಭಾರತದ ಮತ್ತೋರ್ವ ಪ್ರಮುಖ ನಟಿಯ ಅಪಹರಣಕ್ಕೂ ಸುನಿ ಮತ್ತು ಗ್ಯಾಂಗ್ ಯೋಜನೆ ರೂಪಿಸಿದ್ದರಂತೆ. ಈ ವಿಷಯವನ್ನು ಪೊಲೀಸರು ಬಹಿರಂಗಗೊಳಿಸಿದ್ದು ಆ ನಟಿಯ ಹೆಸರು ಬಹಿರಂಗಪಡಿಸಿಲ್ಲ. ಈ ನಟಿಗೆ ಈಗಾಗಲೇ ಮದುವೆಯಾಗಿದ್ದು, ಅವರು ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಮಾತ್ರ ಹೇಳಿದ್ದಾರೆ. ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ವ್ಯಾಪಕ ತನಿಖೆ ಕೈಗೊಂಡಿದ್ದಾರೆ.

ಕಿರುಕುಳ ಪ್ರಕರಣವನ್ನು ಮಾಧ್ಯಮಗಳಲ್ಲಿ ಸೆನ್ಸೇಷನ್ ಸುದ್ದಿಯಾಗಿ ಬಿತ್ತರಿಸುತ್ತಿದ್ದು, ವರದಿಯಲ್ಲಿ ಆತುರಾತುರವಾದ ತಪ್ಪುತಪ್ಪಾದ ಮಾಹಿತಿ ನೀಡಲಾಗುತ್ತಿದೆ. ಇದು ತಮ್ಮ ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ ಎಂದು ಫೇಸ್ ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ನಟರು ಪ್ರತಿಕ್ರಿಯೆ ನೀಡಿದ್ದಾರೆ. ಸಂತ್ರಸ್ತರ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಅವರ ನೋವು ನಿಮಗೆ ಅರ್ಥವಾಗುತ್ತದೆ. ಮಹಿಳೆ ಮೇಲಿನ ದೌರ್ಜನ್ಯವನ್ನು ಕಟು ಶಬ್ದಗಳಿಂದ ಖಂಡಿಸುತ್ತಿದ್ದು, ಕೂಡಲೇ ದುಷ್ಕರ್ಮಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು ಎಂದು ಖ್ಯಾತ ನಟ ಪೃಥ್ವಿರಾಜ್ ಆಗ್ರಹಿಸಿದ್ದಾರೆ.

Leave a Reply

comments

Related Articles

error: