ಕರ್ನಾಟಕದೇಶಪ್ರಮುಖ ಸುದ್ದಿ

ಭಾರಿ ಮಳೆಗೆ ಉತ್ತರಕರ್ನಾಟಕ ತತ್ತರ: ಪ್ರವಾಹ ಪರಿಸ್ಥಿತಿ ನಿರ್ಮಾಣ, 3 ದಿನದಿಂದ ಮನೆಯಿಂದ ಹೊರಗೆ ಬಾರದ ಜನ

ಬೀದರ್: ಆಂಧ್ರ ಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕಲಬುರ್ಗಿ ಮತ್ತು ಬೀದರ್ ನಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬೀದರ್ ಮತ್ತು ಕಲಬುರ್ಗಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ಹಲವೆಡೆ ಜನವಸತಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.
ಭೂಕುಸಿತ: ಕಲಬುರ್ಗಿಯ ಮೈನಾಳ ಗ್ರಾಮದಲ್ಲಿ ಅರ್ಧ ಕಿಮೀವರೆಗೂ ಭೂಕುಸಿತ ಉಂಟಾಗಿದ್ದು, ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದ ಕುಸಿತ ಉಂಟಾಗಿದೆ ಎನ್ನಲಾಗಿದೆ.
ಸೇತುವೆಗಳು ಮುಳುಗಡೆ: ಇನ್ನು, ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು ಚಿಂಚೋಳಿ ಮತ್ತು ಗೋಟೂರ ನಡುವಿನ ಸೇತುವೆಯು ಕಾಗಿಣ ನದಿಯ ಪ್ರವಾಹದಿಂದ ಸಂಪೂರ್ಣ ಮುಳುಗಡೆಯಾಗಿದೆ. ಚಿತ್ತಾಪುರ ತಾಲೂಕಿನ ಗೋಳಾ ಕೆ ಗ್ರಾಮದ ಬಳಿ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರು ಶರಣಗೌಡ ಎಂಬುವರ ತೋಟದ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದಾರೆ. ಚಿತ್ತಾಪುರ ತಾಲೂಕಿನ ದಂಡೋತಿ ಮತ್ತು ಸೇಡಂ ತಾಲೂಕಿನ ಮಳಖೇಡ ಸೇತುವೆಗಳು ಕೂಡ ಮುಳುಗಡೆಯಾಗಿವೆ. ಕಾಗಿಣಾ ನದಿಯ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಮಳಖೇಡ ಸೇತುವೆ ಮೇಲೆ ನೀರು ಹರಿದಿದ್ದರಿಂದ ನಾಲ್ಕು ಬಾರಿ ರಾಜ್ಯ ಹೆದ್ದಾರಿ ರಸ್ತೆ ಸ್ಥಗಿತಗೊಂಡಿತ್ತು. ಸೇತುವೆ ಬಳಿ ಲಾರಿಯೊಂದು ಮುಳುಗಿದ್ದು, ಲಾರಿಯೊಳಗೆ ಸಿಲುಕಿದ್ದ ಚಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಮಳೆ ಅಬ್ಬರಕ್ಕೆ ಸುಮಾರು 390ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ.
ಬೀದರ್ ಜಿಲ್ಲೆಯ ಐದು ಕೆರೆಗಳು ಕಟ್ಟೆ ಒಡೆದ ಪರಿಣಾಮ ಮಾಂಜರಾ ನದಿ, ಹಳ್ಳ ಹಾಗೂ ಕೆರೆಗಳು ತುಂಬಿ ಹರಿಯುತ್ತಿದ್ದು, 10 ಪ್ರಮುಖ ಸೇತುವೆಗಳು ಮುಳುಗಡೆಯಾಗಿವೆ. ಜಿಲ್ಲೆಯಾದ್ಯಂತ 1,152ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ತಿಳಿದುಬಂದಿದೆ. ಮುಂದಿನ ಮೂರು ದಿನ ಉತ್ತರಕರ್ನಾಟಕದಾದ್ಯಂತ ಭಾರಿ ಮಳೆ ಸುರಿಯಲಿದೆ ಎನ್ನಲಾಗಿದೆ.
ಆಂಧ್ರ, ತಲಂಗಾಣದಲ್ಲೂ ಭಾರಿ ಮಳೆ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುರಿಯುವ ಮಳೆಯಿಂದಾಗಿ ಇಲ್ಲಿಯವರೆಗೆ 13 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ವಿಶಾಖಪಟ್ಟಣಂನಲ್ಲಿ ನಿನ್ನೆ ಸಂಭವಿಸಿದ್ದ ಪ್ರವಾಹದಲ್ಲಿ ನಿನ್ನೆ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಕೊಂಗುಡು ಗ್ರಾಮದ ಸೇತುವೆ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಸಿಲುಕಿದ್ದ ಮಗು ರಕ್ಷಣೆಎ ಯತ್ನಿಸಿದ್ದ ಮಹಿಳೆಯೊಬ್ಬರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.
ಹೈದರಾಬಾದ್ ನಲ್ಲೂ ಮಳೆ ಅಬ್ಬರ ಮುಂದುವರೆದಿದ್ದು, ಮಳೆಯಿಂದಾಗಿ ಗುಂಟೂರು ಮತ್ತು ಸಿಕಿಂದ್ರಾಬಾದ್ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ಮತ್ತೆ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹೈದರಾಬಾದ್‌ ಸೇರಿ ಎರಡೂ ರಾಜ್ಯಗಳ ವಿವಿಧ ನಗರಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

Leave a Reply

comments

Related Articles

error: