ಮೈಸೂರು

ಭ್ರಷ್ಟಾಚಾರದಲ್ಲಿ ಭಾಗಿಯಾದ ಸಚಿವರನ್ನು, ಶಾಸಕರನ್ನು ವಜಾಗೊಳಿಸಲು ಬಿಜೆಪಿ ಒತ್ತಾಯ : ಬೃಹತ್ ಪ್ರತಿಭಟನೆ

ರಾಜ್ಯ ಸರ್ಕಾರದ ಅನಾಚಾರಗಳು  ಮುಂದುವರಿಯುತ್ತಲೇ ಇದ್ದು, ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಇನ್ನೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ ಎನ್ನುವುದನ್ನು ದೃಢಪಡಿಸಿವೆ.ಆದರೆ ಮುಖ್ಯಮಂತ್ರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಬದಲು ಬಿಜೆಪಿ ಆರೋಪಗಳನ್ನು ನಿರಾಕರಿಸುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಬಹುತೇಕ ಪ್ರಕರಣಗಳು ತೀರಾ ಗಂಭೀರ ಸ್ವರೂಪದ್ದಾಗಿದ್ದರೂ ಮುಖ್ಯಮಂತ್ರಿಗಳು ಅವುಗಳನ್ನು ತೀರಾ ಹಗುರವಾಗಿ ಪರಿಗಣಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷ  ಗಂಭೀರವಾಗಿ ಆರೋಪಿಸಿದೆ.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕರ ಮುಂದೆ ಬಿಚ್ಚಿಡುವ ಸಲುವಾಗಿ  ರಾಜ್ಯಾದ್ಯಂತ ಎಲ್ಲಾ ಮಂಡಲ ಹಾಗೂ ಜಿಲ್ಲಾ ಮಟ್ಟದಲ್ಲಿ  ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು  ಮೈಸೂರಿನಲ್ಲಿಯೂ ನಡೆಯಿತು.  ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ  ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ ಹಾಗೂ ಹಗರಣಗಳ ಸರಮಾಲೆಯನ್ನೇ ನೀಡಿದೆ.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದುತ್ವದ ಆಧಾರದ ಮೇಲೆ ಕೆಲಸ ಮಾಡುವವರನ್ನು ಹತ್ಯೆ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ಭ್ರಷ್ಟಾಚಾರ, ಹಗರಣಗಳ  ಮುಕ್ತ, ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಆಶ್ವಾಸನೆ ನೀಡಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಇಂದು ಹಗರಣಗಳ  ಸರಮಾಲೆಯನ್ನು ಹೊತ್ತ, ಸ್ವಜನಪಕ್ಷಪಾತ, ಪಾರದರ್ಶಕ ರಹಿತ ಆಡಳಿತ ನೀಡುತ್ತಿದೆ. ಸಂಪುಟದ ತುಂಬೆಲ್ಲಾ ಭ್ರಷ್ಟರೆ ತುಂಬಿಕೊಂಡಿದ್ದಾರೆ. ಸಿದ್ದರಾಮಯ್ಯನವರೇ ನೀವು ಮೈಸೂರು ಭಾಗದ ಮುಖ್ಯಮಂತ್ರಿಯಾಗಿ ಈ ಭಾಗಕ್ಕೆ ಯಾವ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದೀರಿ ಅದನ್ನು  ಜನರ ಮುಂದಿಡಿ ಎಂದರು. ಭ್ರಷ್ಟಾಚಾರ ಹಾಗೂ ಸಾವಿರಾರು ಕೋಟಿ ಹಗರಣಗಳನ್ನು ಬಯಲಿಗೆಳೆಯಲು ನ್ಯಾಯಾಂಗ ಆಯೋಗ ರಚಿಸಿ ಎಂದು ಒತ್ತಾಯಿಸಿದರು.

ಸಚಿವ ರಮೇಶ್ ಜಾರಕಿ ಹೊಳಿ ಅವರನ್ನು ಸಂಪುಟದಿಂದ ತಕ್ಷಣ ವಜಾ ಮಾಡಿ, ಮೇಲ್ನೋಟಕ್ಕೆ ಹಣಕಾಸು ಅಕ್ರಮಗಳನ್ನು ಎಸಗಿರುವುದು ಸಾಬೀತಾಗಿರುವುದರಿಂದ ಇಬ್ಬರು ಕಾಂಗ್ರೆಸ್ ಶಾಸಕರಿಗೆ ನೋಟೀಸ್ ಜಾರಿ ಮಾಡಿ ಅವರನ್ನು ಶಾಸಕಾಂಗ ಪಕ್ಷದಿಂದ ಅಮಾನತುಗೊಳಿಸಿ. ಎಲ್ಲ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿ ಪ್ರಕರಣಗಳಿಗೆ ತಾತ್ವಿಕ ಅಂತ್ಯ ಕಾಣಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಸೇರಿದಂತೆ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಮಾಜಿ ಸಚಿವ ಎಸ್.ಎ.ರಾಮದಾಸ್ ,ಮಾಜಿ ಸಚಿವ ತೋಂಟದಾರ್ಯ, ಮಾಜಿ ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಮಾರುತಿ ರಾವ್ ಪವಾರ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಮೈ.ಪ.ಪ್ರಕಾಶ್, ಸತೀಶ್ ಸೇರಿದಂತೆ 500ಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: