
ಮೈಸೂರು
ಕಾನೂನು ಉಲ್ಲಂಘಿಸಿ ನಿಯಮ ಬಾಹಿರವಾಗಿ ಎಸ್ಸಿ/ಎಸ್ಟಿ ಪಂಗಡಕ್ಕೆ ಮೀಸಲಿರಿಸಿದ ಶೇ.24.10 ಅನುದಾನ ಹಣ ತಾರತಮ್ಯ ಮಾಡಿ ವಂಚಿಸಿ ಹಂಚಿಕೆ : ಪ್ರತಿಭಟನೆ
ಮೈಸೂರು,ಆ.29:- ಕಾನೂನು ಉಲ್ಲಂಘಿಸಿ ನಿಯಮ ಬಾಹಿರವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಶೇ.24.10 ಅನುದಾನ ಹಣವನ್ನು ದುರುದ್ದೇಶದಿಂದ ತಾರತಮ್ಯ ಮಾಡಿ ವಂಚಿಸಿ ಹಣ ಹಂಚಿಕೆ ಮಾಡಿರುವುದನ್ನು ವಿರೋಧಿಸಿ ಪಾಲಿಕೆ ಎದುರು ಪಾಲಿಕೆ ವಾರ್ಡ್ ನಂಬರ್ 28ರ ಸದಸ್ಯೆ ಡಾ.ಅಶ್ವಿನಿ ಭರತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿಂದು ಪಾಲ್ಗೊಂಡು ಮಾತನಾಡಿದ ಅವರು ಮೈಸೂರು ನಗರ ಪಾಲಿಕೆಯಲ್ಲಿ 2019-20ನೇ ಸಾಲಿನ ಎಸ್ ಎಫ್ ಸಿ ಮುಕ್ತ ನಿಧಿ ಅನುದಾನ ಹಾಗೂ ಸಾಮಾನ್ಯ ನಿಧಿ ಅನುದಾನದ ಶೇ. 24.10ರ ಕಾರ್ಯಕ್ರಮಗಳ ಕ್ರಿಯಾಯೋಜನೆಯ ಹಣವನ್ನು ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿಯ 30-052019ರ ಸಭೆಯ ನಡಾವಳಿಯ ಶಿಪಾರಸ್ಸಿನಂತೆ ಕೆಲವು ಅತಿ ಹೆಚ್ಚು ಎಸ್ ಸಿ/ಎಸ್ ಟಿ ಜನಸಂಖ್ಯೆ ಹೊಂದಿರುವ ವಾರ್ಡ್ ಗಳಿಗೆ ಅಗತ್ಯಕ್ಕಿಂತ ಕಡಿಮೆ ಹಣ ಹಂಚಿಕೆ ಮಾಡಿ ಅತಿ ಕಡಿಮೆ ಎಸ್ ಸಿ /ಎಸ್ ಟಿ ಜನಸಂಖ್ಯೆ ಹೊಂದಿರುವ ವಾರ್ಡ್ ಗಳಿಗೆ ಅಗತ್ಯಕ್ಕಿಂತ ಹೆಚ್ಚು ಹಣ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಇದರಿಂದ ಎಸ್ಸಿ/ಎಸ್ಟಿ ಜನಾಂಗದವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಅನ್ಯಾಯವಾಗುತ್ತಿದ್ದು, ಈಗಾಗಲೇ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿರುವುದರಿಂದ ಹಾಗೂ ಎಸ್ ಸಿ/ಎಸ್ ಟಿ ಮೀಸಲು ವಾರ್ಡ್ ಗಳ ಸದಸ್ಯರುಗಳು ವಿರೋಧ ವ್ಯಕ್ತಪಡಿಸದೆ ಸಮ್ಮತಿ ಸೂಚಿಸಿರುವುದು ಅಕ್ಷಮ್ಯ ಮತ್ತು ಗಮನಾರ್ಹ. ಸಾಮಾಜಿಕ ನ್ಯಾಯ ಸಮಿತಿ ಕೈಗೊಂಡಿರುವ ತೀರ್ಮಾನವು ಸಂವೀಧಾನ ವಿರೋಧಿಯಾಗಿದ್ದು, ರಾಜ್ಯ ಸರ್ಕಾರದ ಆದೇಶ ಸ್ಪಷ್ಟ ಉಲ್ಲಂಘನೆಯಾಗಿದೆ. ಪರಿಶಿಷ್ಟ ಜಾತಿ/ಪ.ಪಂಗಡಗಳಿಗೆ ದುರುದ್ದೇಶದಿಂದ ವಂಚಿಸುವ ಸಲುವಾಗಿ ತಾರತಮ್ಯದ ಮೂಲಕ ಹಣ ಹಂಚಿಕೆ ಮಾಡಿರುವ ಈ ಅನುಮೋದನೆಯನ್ನು ತುರ್ತಾಗಿ ತಡೆ ಹಿಡಿದು ಮತ್ತೊಮ್ಮೆ ಕಾನೂನಾತ್ಮಕವಾಗಿ ಪರಿಶೀಲಿಸಿ ಆಗಿರುವ ಅನ್ಯಾಯವನ್ನು ನಿಯಮಾನುಸಾರ ಸರಿಪಡಿಸಿ ಪ.ಜಾತಿ/ಪ,ಪಂಗಡದ ಸಾಂವಿಧಾನಿಕ ಹಕ್ಕು ಮತ್ತು ಅವಕಾಶಗಳನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಲ್ಲವಿ ಬೇಗಂ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)