
ಮೈಸೂರು
ಜೆಎಸ್ಎಸ್ ಕಾಲೇಜಿನಲ್ಲಿ ‘ಫಿಟ್ ಇಂಡಿಯಾ’ ಕಾರ್ಯಕ್ರಮ ನೇರ ವೀಕ್ಷಣೆ
ಮೈಸೂರು,ಆ.29:- ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹೊಸದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದ ಸಂಕೀರ್ಣದಲ್ಲಿ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕಾರ್ಯಕ್ರಮದ ನೇರಪ್ರಸಾರದ ವೀಕ್ಷಣೆಯನ್ನು ಏರ್ಪಡಿಸಲಾಗಿತ್ತು.
ರಾಷ್ಟ್ರೀಯ ಕ್ರೀಡೆಯಾದ ಹಾಕಿಯಲ್ಲಿ ಅಪ್ರತಿಮ ಸಾಧನೆ ತೋರಿರುವ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ 114ನೇ ಜನ್ಮದಿನದ ಅಂಗವಾಗಿ ಇಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಲಾಗುತ್ತಿದೆ. ಈ ದಿನವನ್ನು ಮತ್ತಷ್ಟು ಅರ್ಥಪೂರ್ಣವಾಗಿಸುವ ದಿಸೆಯಿಂದ ಇಂದು ಪ್ರಧಾನಮಂತ್ರಿಗಳು ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಆರೋಗ್ಯವಂತ ಯುವಕರು ದೇಶದ ಸಂಪತ್ತಾಗಿದ್ದಾರೆ. ಜೀವನ ವಿಧಾನದ ಏರುಪೇರಿನಿಂದ ಜನತೆ ಸಕ್ಕರೆ ಖಾಯಿಲೆ, ರಕ್ತದೊತ್ತಡ ಮೊದಲಾದವುಗಳಿಗೆ ಒಳಗಾಗುತ್ತಿದ್ದಾರೆ. ಇಂತಹವುಗಳಿಂದ ಹೊರಬರಬೇಕಾದರೆ ಯೋಗ, ವ್ಯಾಯಾಮ, ಒತ್ತಡ ನಿರ್ವಹಣೆ, ಉತ್ತಮ ಜೀವನ ವಿಧಾನದಿಂದ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಇಟ್ಟು ಕೊಳ್ಳಬೇಕು. ಮೂಲಕ ದೇಶದ ಸ್ವಾಸ್ಥ್ಯವನ್ನು ಕಾಪಾಡಬೇಕೆಂದು ಪ್ರಧಾನಿಯವರು ಕರೆ ಕೊಟ್ಟರು.
ಈ ನೇರಪ್ರಸಾರದ ವೀಕ್ಷಣೆ ಕಾರ್ಯಕ್ರಮದಲ್ಲಿ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)